ADVERTISEMENT

ಮಂಡ್ಯ: ಕಮಲ್ ಭಾವಚಿತ್ರಕ್ಕೆ ‘ಚಪ್ಪಲಿ ಸೇವೆ’

‘ಥಗ್‌ ಲೈಫ್‌’ ಚಲನಚಿತ್ರ ಪ್ರದರ್ಶಿಸಿದರೆ ಸಿನಿಮಾ ಮಂದಿರಕ್ಕೆ ಮುತ್ತಿಗೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:32 IST
Last Updated 3 ಜೂನ್ 2025, 15:32 IST
ತಮಿಳು ನಟ ಕಮಲ್‌ ಹಾಸನ್‌ ತಕ್ಷಣ ಕರ್ನಾಟಕದ ಜನತೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಮಂಗಳವಾರ ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಕಮಲ್‌ ಹಾಸನ್‌ ಭಾವಚಿತ್ರಕ್ಕೆ ‘ಚಪ್ಪಲಿ ಸೇವೆ’ ಮಾಡಿದರು
ತಮಿಳು ನಟ ಕಮಲ್‌ ಹಾಸನ್‌ ತಕ್ಷಣ ಕರ್ನಾಟಕದ ಜನತೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಮಂಗಳವಾರ ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಕಮಲ್‌ ಹಾಸನ್‌ ಭಾವಚಿತ್ರಕ್ಕೆ ‘ಚಪ್ಪಲಿ ಸೇವೆ’ ಮಾಡಿದರು   

ಮಂಡ್ಯ: ಕನ್ನಡಿಗರಿಗೆ ಅಪಮಾನ ಮಾಡಿರುವ ತಮಿಳು ನಟ ಕಮಲ್‌ ಹಾಸನ್‌ ತಕ್ಷಣ ಕರ್ನಾಟಕದ ಜನತೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಕಮಲ್‌ ಹಾಸನ್‌ ಭಾವಚಿತ್ರಕ್ಕೆ ‘ಚಪ್ಪಲಿ ಸೇವೆ’ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹಾವೀರ ವೃತ್ತದಲ್ಲಿ ಬೆಂಗಳೂರು– ಮೈಸೂರು ಹೆದ್ದಾರಿ ವಾಹನ ಸಂಚಾರ ತಡೆದು, ಕಮಲ್‌ ಹಾಸನ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ತಮಿಳಿನಿಂದ ಕನ್ನಡ ಹುಟ್ಟಿತು’ ಎಂಬ ಹೇಳಿಕೆ ನೀಡಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅಪಮಾನ ಮಾಡಿರುವ ನಟ ಕಮಲ್ ಹಾಸನ್, ತಪ್ಪು ಮಾಡಿದ್ದರೂ ತಾನು ತಪ್ಪೇ ಮಾಡಿಲ್ಲ ಎಂದು ಉದ್ಧಟತನ ಪ್ರದರ್ಶಿಸುತ್ತಿರುವುದು ಏಕೆ? ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ADVERTISEMENT

ಪ್ರೀತಿಯಿಂದ ಕನ್ನಡ ಭಾಷೆ ಬಗ್ಗೆ ಮಾತನಾಡಿದ್ದೀನಿ ಎಂಬುವುದನ್ನು ಹೇಳುವ ನಟ ಕಮಲ್‌ ಹಾಸನ್‌, ಮತ್ತೆ ಉದ್ಧಟತನ ಪ್ರದರ್ಶನ ಮಾಡುವ ಮೂಲಕ ತಾನು ‘ಜೂನಿಯರ್ ಜಯಲಲಿತಾ’ ಎಂಬುದನ್ನು ಪ್ರದರ್ಶನ ಮಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಅವರ ಸಿನಿಮಾ ಪ್ರದರ್ಶನ ನಿಷೇಧಿಸಿದ ಹಿನ್ನೆಲೆಯಲ್ಲಿ ‘ಥಗ್ ಲೈಫ್’ ಬಿಡುಗಡೆಗಾಗಿ ಕೋರ್ಟ್‌ ಮೊರೆ ಹೋಗಿದ್ದಾರೆ. ಅಲ್ಲಿಯೂ ಕ್ಷಮೆ ಕೇಳುವಂತೆ ಕೋರ್ಟ್‌ ಛೀಮಾರಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡದ ಎಲ್ಲ ಟಿವಿ ವಾಹಿನಿಗಳು, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಮಲ್ ಹಾಸನ್ ಸಿನಿಮಾ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಇದನ್ನು ಮೀರಿ, ಚಿತ್ರಮಂದಿರಗಳು ಚಿತ್ರ ಪ್ರದರ್ಶನ ಮಾಡುವ ಸಾಹಸ ಮಾಡಿದಲ್ಲಿ ಮುತ್ತಿಗೆ ಹಾಕಿ, ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ಜಯರಾಮು, ಕಲಾವಿದ ಪ್ರಕಾಶ್, ಮುಖಂಡರಾದ ಸೋಮಶೇಖರ್, ಎಸ್.ಎನ್.ಪ್ರವೀಣ್, ಕೆ.ಬಿ. ಜಯಶಂಕರ್, ಸಿದ್ದೇಗೌಡ, ವೆಂಕಟೇಶ್, ಶೇಖರ್, ಎಸ್.ಕೆ. ಶಿವಣ್ಣ, ಸಿದ್ದು, ಮಹೇಂದ್ರ, ಪಾಂಡು, ಮದ್ದೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.