ADVERTISEMENT

ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರುದ್ಧ ಮುಷ್ಕರ 26ಕ್ಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 12:39 IST
Last Updated 17 ಅಕ್ಟೋಬರ್ 2020, 12:39 IST

ಮಂಡ್ಯ: ‘ಕಾರ್ಪೊರೇಟ್‌ ಬಂಡವಾಳಗಾರರ ಪರ 29 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ, 4 ಸಂಹಿತೆಗಳನ್ನಾಗಿ ಸಂಸತ್‌ನಲ್ಲಿ ಅಂಗೀಕರಿಸಿರುವುದನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನ.26 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿವೆ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ಹಾಗೂ ಕೋವಿಡ್‌ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸ್ವಯಂ ಪ್ರೇರಿತ ಬಂದ್‌ ಮಾದರಿಯಲ್ಲಿ ದೊಡ್ಡ ಮುಷ್ಕರ ನಡೆಯಲಿದೆ. ಐಕ್ಯತೆ, ಸಮಗ್ರತೆ, ಏಕತೆ ರೂಪಿಸಲು ಎಲ್ಲರೂ ಕೈ ಜೋಡಿಸಿ ಮುಷ್ಕರ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಉದ್ಯೋಗ ಭದ್ರತೆ, ನಿವೃತ್ತಿ ನಂತರದ ಸೌಲಭ್ಯಗಳು, ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳು ನಾಶವಾಗುತ್ತದೆ. ಉದ್ಯೋಗ ನಷ್ಟ ಸಂಭವಿಸಿ ಕಾರ್ಮಿಕರನ್ನು ಶೋಷಣೆಯ ಕೂಪಕ್ಕೆ ತಳ್ಳಲಾಗುತ್ತದೆ. ವೇತನಕ್ಕೆ ಬದಲಾಗಿ ಮೂಲ ವೇತನ ಡಿಎ ಮಾತ್ರ ನೀಡಲಾಗುತ್ತದೆ. ಮಾರ್ಚ್‌ನಿಂದ ಇಲ್ಲಿಯವರೆಗೆ ಕೋಟ್ಯಂತರ ಉದ್ಯೋಗ ನಷ್ಟವಾಗಿದ್ದು, ಕಾರ್ಪೊರೇಟ್‌ ಸಂಸ್ಥೆಗಳ ಆಸ್ತಿ ಗಣನೀಯವಾಗಿ ಏರಿಕೆಯಾಗಿದೆ. ಕೂಡಲೇ ಇದನ್ನು ತಪ್ಪಿಸಿ ಕಾರ್ಮಿಕರ ಪರ ಕಾಯಿದೆ ಮುಂದುವರೆಸಬೇಕು, ಉದ್ಯೋಗ ಸೃಷ್ಟಿಸಬೇಕು, ಉದ್ಯೋಗ ಖಾತ್ರಿ ಅಡಿ ಕನಿಷ್ಠ 200 ದಿನಗಳ ಕೆಲಸ, ₹600 ವೇತನ ನೀಡಬೇಕು’ ಎಂದರು.

ADVERTISEMENT

‘ಭಾರತದ ಸ್ವಾವಲಂಬನೆ ಮಾರುವುದನ್ನು ಆತ್ಮನಿರ್ಭರ ಎನ್ನಬೇಕೆ’ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ‘ಮುಷ್ಕರವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅ. 23ರಂದು ಬೆಂಗಳೂರಿನಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ರಾಜ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಸಂಘಟನೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ಬ್ಯಾಂಕ್‌, ವಿಮಾ ನೌಕರರು, ಸರ್ಕಾರಿ ನೌಕರರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಸಹಕಾರ ನೀಡಬೇಕು’ ಎಂದರು.

ರಾಜ್ಯ ಘಟಕದ ಕಾರ್ಯದರ್ಶಿಗಳಾದ ಜಿ.ರಾಮಕೃಷ್ಣ, ಎಚ್‌.ಎಸ್‌.ಸುನಂದಾ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಮಹದೇವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.