ಬೆಳಕವಾಡಿಯ ಕೊಳ್ಳೇಗಾಲ ರಸ್ತೆಯಲ್ಲಿ ಬುಡಸಮೇತ ಮರಗಳು ಮುರಿದು ಬಿದ್ದಿರುವುದು.
ಮಂಡ್ಯ/ಹಾಸನ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿ ಭಾನುವಾರ ರಾತ್ರಿ ಮಧ್ಯರಾತ್ರಿ ಗುಡುಗು, ಮಿಂಚುಸಹಿತ ಮಳೆ ಸುರಿದು ಮರಗಳು, 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಚಾವಣಿ ಹಾರಿ ಹೋಗಿ, ವಾಸದ ಮನೆ, ರೇಷ್ಮೆ ಹುಳು ಸಾಕಣೆ ಮನೆಗಳಿಗೆ ಹಾನಿಯಾಗಿದೆ.
ಜವನಗಹಳ್ಳಿ ಸಮೀಪ ಕೊಳ್ಳೇಗಾಲ ರಸ್ತೆ ಬದಿಯ ಮೂರು ಬಾಗೇ ಮರಗಳು ಬಿದ್ದು, ವಾಹನಗಳು ರಾಷ್ಟ್ರೀಯ ಹೆದ್ದಾರಿ 209ರ ಬೈಪಾಸ್ ರಸ್ತೆಯಲ್ಲಿ ಸಂಚರಿಸಿದವು. ಹಿರೀಸಾವೆ ಹೋಬಳಿಯ ಹೆಗ್ಗಡಿಹಳ್ಳಿ ರಂಗಸ್ವಾಮಿ ಅವರ ರಾಸು ಕೊಟ್ಟಿಗೆಯ ಸಿಮೆಂಟ್ ಶೀಟ್‌ನ ಚಾವಣಿ, ಮರದ ತೀರುಗಳ ಸಮೇತ ಗಾಳಿಗೆ ಹಾರಿ ಮನೆಯ ಮೇಲೆ ಬಿದ್ದಿದೆ.
ತುಮಕೂರು: ಗಾಳಿ ಮಳೆ
ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಸಂಜೆ ಉತ್ತಮ ಮಳೆ ಸುರಿಯಿತು. ಹಲವು ಕಡೆ ಮಳೆ ಮತ್ತು ಗಾಳಿಗೆ ಮರ, ವಿದ್ಯುತ್ ಕಂಬ ಉರುಳಿ ಬಿದ್ದು ವಾಹನಗಳು ಜಖಂಗೊಂಡಿವೆ.
ಬಿ.ಎಚ್.ರಸ್ತೆ, ಜಿಲ್ಲಾ ಆಸ್ಪತ್ರೆ ಆವರಣ, ವಿನಾಯಕ ನಗರದ ವಿವಿಧ ಕಡೆ ಕಾರು, ಬೈಕ್ ಮತ್ತು ಆಂಬುಲೆನ್ಸ್ ಮೇಲೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ವಾಹನಗಳಿಗೆ ಹಾನಿಯಾಗಿದೆ. ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ ನಾಲ್ಕು ಕಾರುಗಳ ಮೇಲೆ ಮರದ ಕೊಂಬೆ ಮುರಿದು ಬಿದ್ದಿವೆ.
ಸಿಡಿಲು ಬಡಿದು ಮಹಿಳೆ ಸಾವು:
ಆನವಟ್ಟಿ (ಶಿವಮೊಗ್ಗ ಜಿಲ್ಲೆ): ಸಮೀಪದ ಗಿಣಿವಾಲ ಗ್ರಾಮದಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು ಅಂಗನವಾಡಿ ಸಹಾಯಕಿ ಮಾಲತಿ ಮಂಜಪ್ಪ ಕೊಡಗಂಟಿ (42) ಮೃತಪಟ್ಟಿದ್ದಾರೆ.
ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಗುಡುಗು, ಸಿಡಿಲು ಸಮೇತ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಸಿಡಿಲು ಬಡಿದಿದ್ದರಿಂದ ಅವರು ಮೃತಪಟ್ಟಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.