ADVERTISEMENT

ಶ್ರೀರಂಗಪಟ್ಟಣ: ಗದ್ದೆ ರಂಗನಾಥಸ್ವಾಮಿ ದೇಗುಲ ಪುನರ್‌ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 16:34 IST
Last Updated 10 ಮೇ 2022, 16:34 IST
ಶ್ರೀರಂಗಪಟ್ಟಣ ಸಮೀಪ ಬೆಂಗಳೂರು– ಮೈಸೂರು ದಶಪಥ ರಸ್ತೆ ಕಾಮಗಾರಿಗಾಗಿ ತೆರವು ಮಾಡಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ
ಶ್ರೀರಂಗಪಟ್ಟಣ ಸಮೀಪ ಬೆಂಗಳೂರು– ಮೈಸೂರು ದಶಪಥ ರಸ್ತೆ ಕಾಮಗಾರಿಗಾಗಿ ತೆರವು ಮಾಡಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ   

ಶ್ರೀರಂಗಪಟ್ಟಣ: ಪಟ್ಟಣ ಸಮೀಪ ಬೆಂಗಳೂರು– ಮೈಸೂರು ದಶಪಥ ರಸ್ತೆ ನಿರ್ಮಾಣ ಕಾಮಗಾರಿಗಾಗಿ ತೆರವಾಗಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯದ ಪುನರ್‌ ನಿರ್ಮಾಣ ಕಾರ್ಯ ಶುರುವಾಗಿದೆ.

ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಕಾವೇರಿ ನದಿ ದಂಡೆಯಲ್ಲಿದ್ದ ಐತಿಹಾಸಿಕ ದೇಗುಲವನ್ನು ವರ್ಷದ ಹಿಂದೆ ತೆರವು ಮಾಡಲಾಗಿತ್ತು. ದೇವಾಲಯವನ್ನು ಕೆಡವಿದ ಬಳಿಕ ಗರ್ಭಗುಡಿಯಲ್ಲಿದ್ದ ಮೂರ್ತಿಯನ್ನು ಸಂರಕ್ಷಿಸಿ ಇಡಲಾಗಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ದೇವಾಲಯ ನಿರ್ಮಿಸಿಕೊಡುವುದಾಗಿ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಡಿಬಿಎಲ್‌ ಗುತ್ತಿಗೆ ಕಂಪನಿ ಭರವಸೆ ನೀಡಿತ್ತು. ಅದರಂತೆ ದೇವಾಲಯ ಇದ್ದ ಎಡ ಪಾರ್ಶ್ವದಲ್ಲಿ, 100 ಮೀಟರ್‌ ಅಂತರದಲ್ಲಿ ದೇವಾಲಯದ ಪುನರ್‌ ನಿರ್ಮಾಣ ಕಾರ್ಯ ಆರಂಭವಾಗಿದೆ.

ಕಾವೇರಿ ನದಿ ತೀರದ ಸರ್ಕಾರಿ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. 20/30 ಅಡಿ ಅಳತೆಯ ಪ್ರಾಂಗಣದ ದೇಗುಲ ನಿರ್ಮಿಸಲು ಅಡಿಪಾಯ ಹಾಕಲಾಗಿದೆ. ಜತೆಗೆ 10/10 ಅಡಿ ಉದ್ದದ ಗರ್ಭಗುಡಿ ಕೂಡ ಇರುತ್ತದೆ. ದೇವಾಲಯ ನಿರ್ಮಾಣಕ್ಕಾಗಿ ಕಲ್ಲಿನ ಕಂಬಗಳನ್ನು ತರಿಸಲಾಗಿದೆ. ಮೂರು ತಿಂಗಳಲ್ಲಿ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಉಪ ಗುತ್ತಿಗೆದಾರರು ತಿಳಿಸಿದ್ದಾರೆ.

ADVERTISEMENT

ಗದ್ದೆ ರಂಗನಾಥಸ್ವಾಮಿ ದೇವಾಲಯವನ್ನು ಪಟ್ಟಣದ ಜೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದ ತಂಡ ಪುನರ್‌ ನಿರ್ಮಿಸಲು ಮುಂದಾಗಿತ್ತು. ದೇವರ ಮೂರ್ತಿಗೆ ಕಳಾಕರ್ಷಣೆ ಇತರ ಕೈಂಕರ್ಯಗಳನ್ನೂ ಪೂರೈಸಿತ್ತು. ಬದಲಾದ ಪರಿಸ್ಥಿತಿಯಲ್ಲಿ ಗುತ್ತಿಗೆ ಕಂಪನಿಯೇ ದೇಗುಲ ನಿರ್ಮಾಣಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.