ADVERTISEMENT

ಜಾತಿ ಸಮೀಕ್ಷಾ ವರದಿ ಜನರ ಮುಂದೆ ಬರಲಿ

ಹಿಂದುಳಿದ ಸಮುದಾಯಗಳ ನೂತನ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ; ಎಚ್‌.ಎ.ವೆಂಕಟೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 3:10 IST
Last Updated 11 ಜನವರಿ 2021, 3:10 IST
ಹಿಂದುಳಿದ ವರ್ಗಗಳ ಸಮುದಾಯಗಳಿಂದ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ನೂತನ ಸದಸ್ಯರನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು
ಹಿಂದುಳಿದ ವರ್ಗಗಳ ಸಮುದಾಯಗಳಿಂದ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ನೂತನ ಸದಸ್ಯರನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು   

ಮಂಡ್ಯ: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಶೀಘ್ರ ಬಿಡುಗಡೆಯಾಗಬೇಕು. ಸರ್ಕಾರ ಒಪ್ಪಲಿ ಬಿಡಲಿ, ವರದಿಯ ವಿವರಗಳನ್ನು ಜನರ ಮುಂದಿಡಬೇಕು’ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌ ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಸನ್ನಿವೇಶದಲ್ಲಿ ಮೀಸಲಾತಿಗಾಗಿ ಹಲವು ಸಮುದಾಯಗಳ ಮುಖಂಡರು ಪೈಪೋಟಿ ನಡೆಸುತ್ತಿದ್ದಾರೆ. ವಾಸ್ತವವಾಗಿ ಮೀಸಲಾತಿ ಎಂಬುದು ಸುಲಭವಾದ ವಿಚಾರವಲ್ಲ. ಯಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೋ ಅವರಿಗೆ ಮಾತ್ರ ಮೀಸಲಾತಿ ದೊರೆಯಬೇಕು. ಅವಕಾಶ ವಂಚಿತರಿಗೆ ಮೀಸಲಾತಿಯ ಲಾಭ ದೊರೆಯಬೇಕು’ ಎಂದು ಹೇಳಿದರು.

ADVERTISEMENT

‘ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗುವುದಕ್ಕೂ ಮೊದಲೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದರು. 1977ರಲ್ಲಿ ಸಾಕಷ್ಟು ಸವಾಲು ಎದುರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಹಾವನೂರು ವರದಿಯನ್ನು ಜಾರಿಗೊಳಿಸಿದರು. ಇಡೀ ದೇಶದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರು. ಅಂದು ಹಾವನೂರು ವರದಿ ವಿರೋಧಿಸಿದವರು ಇಂದು ಮೀಸಲಾತಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೂರಾರು ಆಯೋಗಗಳನ್ನು ರಚನೆ ಮಾಡಿದೆ. ಆದರೆ ಆಯೋಗಗಳು ಮೀಸಲಾತಿಯನ್ನು ಪರಾಮರ್ಶೆ ಮಾಡಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವಲ್ಲಿ ವಿಫಲವಾಗಿವೆ. ಶೋಷಿತರ ಜೀವನ ಮಟ್ಟ ಅಧ್ಯಯನ ಮಾಡಿ ಮೀಸಲಾತಿ ಪುನರ್‌ ವರ್ಗೀಕರಣ ಮಾಡುವುದೇ ಆಯೋಗಗಳ ಕೆಲಸ’ ಎಂದರು.

‘ಜಾತಿ ಗಣತಿಯ ಮಾಹಿತಿ ಅರಿಯುವುದು ಸಾರ್ವಜನಿಕರ ಹಕ್ಕು. ಅದಕ್ಕಾಗಿ ಸರ್ಕಾರ ₹ 160 ಕೋಟಿ ಹಣ ಖರ್ಚು ಮಾಡಿದೆ. 54 ಮಾನದಂಡಗಳನ್ನು ಇಟ್ಟುಕೊಂಡು ಸಾವಿರಾರು ಸಿಬ್ಬಂದಿ ಸಮೀಕ್ಷೆ ನಡೆಸಿದ್ದಾರೆ. ಸರ್ಕಾರ ಕೂಡಲೇ ವರದಿ ಬಿಡುಗಡೆ ಮಾಡಿ ಅದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು’ ಎಂದು ಹೇಳಿದರು.

‘ಮೀಸಲಾತಿ ಎಂಬುದು ಹಿಂದುಳಿದ ವರ್ಗಗಳ ಬ್ರಹ್ಮಾಸ್ತ್ರವಾಗಿದೆ. ಅರ್ಹರಿಗೆ ಮೀಸಲಾತಿ ದೊರೆಯದಿದ್ದರೆ ಸಂವಿಧಾನಕ್ಕೆ ಅಪಚಾರ ಎಸಗಿದಂತಾಗುತ್ತದೆ. 1972ರಲ್ಲಿ ಹಿಂದುಳಿದ ವರ್ಗಗಳ ಶಾಸಕರ ಸಂಖ್ಯೆ 65 ಇತ್ತು, ಆದರೆ ಈಗ ಅದರ ಸಂಖ್ಯೆ 25ಕ್ಕೆ ಬಂದು ನಿಂತಿದೆ. ಈ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು. ವೈಜ್ಞಾನಿಕ ತಳಹದಿಯ ಮೇಲೆ ಮೀಸಲಾಗಿ ವರ್ಗೀಕರಣ ಮಾಡಿ ಅದರ ಲಾಭ ಬಡವರಿಗೆ ಸಿಗುವಂತೆ ಮಾಡಬೇಕು’ ಎಂದರು.

ಡಿಜೆಸಿಎಂ ಸಮಾಜ ಸೇವಾ ಟ್ರಸ್ಟ್‌ ಅಧ್ಯಕ್ಷ ನಾರಾಯಣ್‌ ತಿರುಮಲಾಪುರ ಮಾತನಾಡಿ ‘ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ನಾಮಾಜಿಕ ನ್ಯಾಯ ನೀಡಿದ ಮುಂಚೂಣಿಯ ನಾಯಕರಾಗಿದ್ದಾರೆ. ಅವರು ನೀಡಿದ ಮೀಸಲಾತಿಯ ಲಾಭ ಪಡೆದು ಅಧಿಕಾರದ ರುಚಿ ನೋಡಿದ ಬಹಳಷ್ಟು ನಾಯಕರು ರಾಜ್ಯದಲ್ಲಿದ್ದಾರೆ. ಅವರ ಸ್ವಾರ್ಥದಿಂದಾಗಿ ಹಿಂದುಳಿದವ ವರ್ಗಗಳು ಮತ್ತಷ್ಟು ಹಿಂದುಳಿಯುವಂತಾಗಿದೆ’ ಎಂದರು.

‘ಮೀಸಲಾತಿಯ ಲಾಭ ಪಡೆದು ಅಧಿಕಾರ ಪಡೆದವರು ತನ್ನ ಹಿಂದಿರುವ ಸಮುದಾಯಗಳ ಬಗ್ಗೆಯೂ ಚಿಂತಿಸಬೇಕು. ಕೆಲವೇ ಕೆಲವು ಸಮುದಾಯಗಳು ಮೀಸಲಾತಿ ಪಡೆದು ಇತರ ಸಮುದಾಯಗಳಿಗೆ ವಂಚನೆಯಾಗುವಂತೆ ಮಾಡಿವೆ. ಅನ್ಯಾಯ, ವಂಚನೆ ಇಲ್ಲದಿದ್ದರೆ ಮೀಸಲಾತಿಯನ್ನು ಕೇಳುವ ಪ್ರಶ್ನೆಯೇ ಬರುತ್ತಿರಲಿಲ್ಲ’ ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಎಲ್‌.ಸಂದೇಶ್‌, ನಿವೃತ್ತ ಎಂಜಿನಿಯರ್‌ ಶಿವರಾಜು, ಭಾರತ ಪಾದಯಾತ್ರೆ ಬಿ.ವೀರಣ್ಣ, ಪರಿಸರ ಗ್ರಾಮೀಣಾಭಿವೃದ್ಧಿ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.