ಮಂಡ್ಯ: ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹೋಟೆಲ್ ಮಾಲೀಕರ ಸಭೆ ಕರೆಯಬೇಕು ಎಂದು ಕದಂಬಸೈನ್ಯ ಸಂಘಟನೆ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಬುಧವಾರ ಮನವಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
‘ಜಿಲ್ಲೆಯ ಹೋಟೆಲ್, ರೆಸ್ಟೋರೆಂಟ್, ಬೀದಿ ಕ್ಯಾಂಟೀನ್‌ಗಳು, ಮಾಂಸಾಹಾರ ತಂಪು ಪಾನೀಯ ಬೇಕರಿ ಸಿಹಿ ತಿಂಡಿ ಅಂಗಡಿಗಳ ಮಾಲೀಕರ ಸಭೆ ನಡೆಸಬೇಕು. ಏಕೆಂದರೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ, ಬೆಲೆ ಏರಿಕೆ ಮಾಡುವುದು ಹಾಗೂ ವ್ಯತ್ಯಾಸದ ಬೆಲೆಗಳು ಕೆಲವು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕಂಡು ಬರುತ್ತಿದೆ’ ಎಂದು ಆರೋಪಿಸಿದರು.
‘ನಗರಸಭೆ, ಆಹಾರ ಸುರಕ್ಷತೆ ಗುಣಮಟ್ಟದ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಪರಿಸರ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳು, ಶಾಸಕರು, ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಸಂಘ ಸಂಸ್ಥೆಗಳು, ಸಂಘಟನೆಗಳ ಸಭೆ ಕರೆದು ಚರ್ಚೆಸಬೇಕು. ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಅಪ್ಪಾಜಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೋಹನ್ ಚಿಕ್ಕಮಂಡ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.