ಪಾಂಡವಪುರ: ಮನುಷ್ಯ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಹುಟ್ಟಿ ಬೆಳೆದಂತಹ ನೆಲದಲ್ಲಿ ಮಾತ್ರ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಂಗಳವಾರ ಸಂಜೆ ಪಾಂಡವ ಬಳಗದ ವತಿಯಿಂದ ಆಯೋಜಿಸಿದ್ದ ತಾಲ್ಲೂಕಿನ ಸೀತಾಪುರ ಗ್ರಾಮದವರಾದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ಉಮಾಶಂಕರ್ ಅವರಿಗೆ ಉತ್ತಮ ಪಾಂಡವ ಉಮಾಶಂಕರ್ ಎಂಬ ಬಿರುದು ಹಾಗೂ ತವರಿನ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಎಸ್.ಆರ್.ಉಮಾಶಂಕರ್ ಅವರು ಅಧಿಕಾರಿಯಾಗಿ ದೊಡ್ಡಮಟ್ಟದಲ್ಲಿ ಬೆಳೆದರೂ ಎಲ್ಲೂ ಅವರು ಮುಕ್ತವಾಗಿ ತಮ್ಮ ಮನದಾಳದ ಮಾತು ಹಂಚಿಕೊಳ್ಳಲು ಸಾಧ್ಯವಿಲ್ಲ. ತವರಿನಲ್ಲಿ ತಮ್ಮ ಮನಸ್ಸಿನೊಳಗಿರುವ ಭಾವನೆಗಳನ್ನು ಹಂಚಿಕೊಳ್ಳಬಹುದಾಗಿದೆ’ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ಉಮಾಶಂಕರ್, ‘ನನ್ನ ಅಧಿಕಾರದ ಅವಧಿಯಲ್ಲಿ ನನಗೆ ಸಿಕ್ಕಂತ ಅವಕಾಶದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸ ನನಗೆ ಆತ್ಮತೃಪ್ತಿ ತಂದಿದೆ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನೆಂದು ಕೆಲಸ ಮಾಡಿಲ್ಲ’ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ತ್ರಿವೇಣಿ ಉಮಾಶಂಕರ್, ಪಾಂಡವ ಬಳಗದ ಎಂ.ಎಸ್.ಮರಿಸ್ವಾಮಿಗೌಡ, ಎಚ್.ಆರ್.ತಿಮ್ಮೇಗೌಡ, ಬಿ.ಎಸ್.ಜಯರಾಮು, ಎಸ್.ನಾರಾಯಣಗೌಡ, ರಾಮಕೃಷ್ಣೇಗೌಡ, ಎಂ.ರಮೇಶ್, ಎಚ್.ಆರ್.ಧನ್ಯಕುಮಾರ್, ಮೇನಾಗರ ಪ್ರಕಾಶ್, ಚಂದ್ರಶೇಖರಯ್ಯ, ನಾಗಲಿಂಗೇಗೌಡ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.