‘ಸರ್ಕಾರಿ ಜಮೀನು ಸಾಬ್ರುಗೆ ಬರೆದುಕೊಟ್ಟರೆ ನೇಣಿಗೆ ಹಾಕುತ್ತೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆಯ ಮಾತುಗಳನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣ: ‘ಸರ್ಕಾರಿ ಜಮೀನು ಸಾಬ್ರುಗೆ ಬರೆದುಕೊಟ್ಟರೆ ನೇಣಿಗೆ ಹಾಕುತ್ತೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ ಮಾತುಗಳನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ರಮೇಶ ಬಂಡಿಸಿದ್ದೇಗೌಡ ಅವರ ವಿರುದ್ಧ ಘೋಷಣೆ ಕೂಗಿದರು. ರಮೇಶ ಬಂಡಿಸಿದ್ದೇಗೌಡ ಅವರು ಅಲ್ಪಸಂಖ್ಯಾತ ಮುಸಲ್ಮಾನರಿಗೆ ದರಖಾಸ್ತು ಜಮೀನು ಮಂಜೂರು ಮಾಡಬಾರದು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಜಮೀನು ಮಂಜೂರು ಮಾಡುವ ಅಧಿಕಾರಿಗಳನ್ನು ನೇಣಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ. ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಧರ್ಮ ನಿರಪೇಕ್ಷತೆಯ ಮೌಲ್ಯಗಳ ಮೇಲೆ ಅವರು ದಾಳಿ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಅಕ್ರಂ ಆಗ್ರಹಿಸಿದರು.
ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಸ್ವಾಮಿ, ಉಪಾಧ್ಯಕ್ಷ ಮೊಹಮದ್ ಶಫಿವುಲ್ಲಾ, ಕಾರ್ಯದರ್ಶಿ ಫರ್ದೀನ್ ಅಹಮದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ರಮೇಶ ಬಂಡಿಸಿದ್ದೇಗೌಡ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಬೇಕು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು-ಮೊಹಮದ್ ಫಿರ್ದೋಷ್, ಎಸ್‌ಡಿಪಿಐ ಮೈಸೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.