ADVERTISEMENT

ಮಳವಳ್ಳಿ: ಐತಿಹಾಸಿಕ ಸಿಡಿಹಬ್ಬಕ್ಕೆ ಚಾಲನೆ

ಕಾಣಿಸದ ಹಬ್ಬದ ವೈಭವ; ಲೈಟಿಂಗ್ ನಿಷೇಧಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:15 IST
Last Updated 27 ಫೆಬ್ರುವರಿ 2021, 3:15 IST
ಪುಟ್ಟಸ್ವಾಮಿ, ಪುರಸಭೆ ಸದಸ್ಯ
ಪುಟ್ಟಸ್ವಾಮಿ, ಪುರಸಭೆ ಸದಸ್ಯ   

ಮಳವಳ್ಳಿ: ಮುನ್ನೂರು ವರ್ಷಗಳ ಇತಿಹಾಸ ಹೊಂದಿರುವ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ವಿಧಿಯುಕ್ತವಾಗಿ ಚಾಲನೆ ದೊರೆತಿದೆ. ಈ ಬಾರಿ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಸರಳವಾಗಿ ಆಚರಿಸಲಾಗುತ್ತಿದೆ.

ಪಟ್ಟಣದ ಸುಲ್ತಾನ್ ರಸ್ತೆಯಲ್ಲಿರುವ ಪಟ್ಟಲದಮ್ಮ ದೇವಿಗೆ ನಸುಕಿನ 4 ಗಂಟೆಯಿಂದಲೇ ಅರ್ಚಕ ನಂಜುಂಡಸ್ವಾಮಿ ನೇತೃತ್ವದಲ್ಲಿ ವಿವಿಧ ಅಭಿಷೇಕ ಮತ್ತು ಹೋಮ-ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದರ್ಶನಕ್ಕೆ ಬಂದಿದ್ದ ಭಕ್ತರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಧರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ದೇವಸ್ಥಾನ ಆವರಣದಲ್ಲಿರುವ ಚಿಕ್ಕಮ್ಮ ತಾಯಿ ಮತ್ತು ದೊಡ್ಡಮ್ಮ ತಾಯಿ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದರು.

ಸಿದ್ಧಾರ್ಥನಗರದ ಯಜಮಾನರು ಸಿಡಿಗೆ ಬಳಸುವ ಹಗ್ಗಕ್ಕೆ ಪೂಜೆ ಸಲ್ಲಿಸಿ ಮೆರೆವಣಿಗೆ ಮೂಲಕ ಸಿಡಿ ಆಚರಣೆಗೆ ಹಗ್ಗ ನೀಡಿದರು. ತಾಲ್ಲೂಕಿನ ತಮ್ಮಡಹಳ್ಳಿ, ಅಂಚೆದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಸಂಜೆ ವೇಳೆ ರೈತರು ತಮಟೆ ಹಾಗೂ ಮಂಗಳವಾದ್ಯಗಳೊಂದಿಗೆ ತಮ್ಮ ರಾಸುಗಳಿಗೆ ಅಲಂಕಾರ ಮಾಡಿಕೊಂಡು ಕೊಂಡಕ್ಕೆ ಸೌದೆ ತಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌದೆ ತಂದ ರಾಸುಗಳು ಮೆರವಣಿಗೆ ಸಾಗಿದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಮುಡುಕುತೊರೆ ಜಾತ್ರೆಯ ಸಮೀಪ ಪೂರ್ಣ ಬೆಳದಿಂಗಳ ಶುಕ್ರವಾರ ಮತ್ತು ಶನಿವಾರ ಹಬ್ಬವನ್ನು ಆಚರಣೆ ಮಾಡುವ ನಿಯಮವಿದೆ. ಸಿಡಿ ಹಬ್ಬದ ಪೂಜಾ ಕೈಂಕರ್ಯಗಳಿಗೆ ಸಂಪ್ರದಾಯದಂತೆ ವ್ಯಕ್ತಿಯೊಬ್ಬರನ್ನು ನೇಮಿಸಿ ಅವರಿಂದ 8 ದಿನಗಳ ಮುಂಚಿತವಾಗಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುತ್ತಾರೆ. ಪಟ್ಟಲದಮ್ಮ ದೇವಿಗೆ ವಿವಿಧ ಹೂಗಳಿಂದ ಆಲಂಕಾರ ಮಾಡಲಾಯಿತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವಿಗೆ ಪೂಜೆ ಸಲ್ಲಿಸಿದರು. ಶನಿವಾರ ಬೆಳಿಗ್ಗೆ ಸಿಡಿ ಹಬ್ಬದ ಕೊಂಡೋತ್ಸವ ಮತ್ತು ಸಿಡಿರಣ್ಣನ ಆಚರಣೆ ನಡೆಯಲಿದೆ.

ಪ್ರತಿ ವರ್ಷವೂ ಸಿಡಿಹಬ್ಬವನ್ನು ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದರು. ಈ ಬಾರಿ ಸರಳವಾಗಿ ನಡೆಯುತ್ತಿರುವ ಹಬ್ಬಕ್ಕೆ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದೆ. ಘಟ್ಟಗಳ ಮೆರವಣಿಗೆ ವೇಳೆ ಅಹಿತರ ಘಟನೆ ನಡೆಯದಂತೆ ಹಾಗೂ ಮಹಿಳೆಯರ ಸುರಕ್ಷತೆಗಾಗಿ 50 ಸಿಸಿಟಿವಿ ಕ್ಯಾಮೆರಾ ಆಳವಡಿಸಿ 200ಕ್ಕೂ ಹೆಚ್ಚು ಪೊಲೀಸರಿಂದ ಬೀಗಿ ಭದ್ರತೆ ಒದಗಿಸಲಾಗಿತ್ತು.

ಕಾಣದ ವೈಭವ: ಸಿಡಿಹಬ್ಬಕ್ಕಾಗಿ ಪ್ರತಿ ವರ್ಷವೂ ಪಟ್ಟಣದ ಅನಂತರಾಂ ವೃತ್ತ, ಕುಪ್ಪಸ್ವಾಮಿ ಸರ್ಕಲ್, ಮಳವಳ್ಳಿ-ಮೈಸೂರು ರಸ್ತೆ, ಮಳವಳ್ಳಿ-ಮದ್ದೂರು, ಕೊಳ್ಳೇಗಾಲ ರಸ್ತೆಗಳಲ್ಲಿ ವಿವಿಧ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡುವ ಪದ್ಧತಿಗೆ ಈ ಬಾರಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗಳ ಗೊಂದಲದಿಂದ ತಡೆ ಉಂಟಾಗಿದೆ.

ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆದ ಸಿಡಿಹಬ್ಬದ ಪೂರ್ವಭಾವಿ ಸಭೆಯಲ್ಲಿ ಫ್ಲೆಕ್ಸ್‌, ಬ್ಯಾನರ್‌, ಧ್ವನಿವರ್ಧಕ, ಡಿ.ಜೆ ಸೌಂಡ್ಸ್, ವಾದ್ಯ, ತಮಟೆ, ಬ್ಯಾಂಡ್ ಸೆಟ್, ಸೀರಿಯಲ್ ಲೈಟಿಂಗ್ ಸೆಟ್ ಬಳಕೆ ನಿಷೇಧಿಸುವಂತೆ ನಿರ್ಧರಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ನೇತೃತ್ವದಲ್ಲಿ ನಡೆದ ಕಾನೂನು ಸುವ್ಯವಸ್ಥೆ ಸಭೆಯಲ್ಲಿ ಸೀರಿಯಲ್ ಲೈಟಿಂಗ್ ಸೆಟ್ ಅಳವಡಿಕೆಗೆ ಅನುಮತಿ ನೀಡುವಂತೆ ಮುಖಂಡರು ಮಾಡಿದ ಮನವಿ ಎಸ್ಪಿ ಸಮ್ಮತಿ ಸೂಚಿಸಿದ್ದರು.
ಇದಕ್ಕೆ ತಾಲ್ಲೂಕು ಆಡಳಿತ ಸ್ಪಂದಿಸದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ಬಾರಿ ರಸಮಂಜರಿ, ನಾಡಕುಸ್ತಿ, ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮವೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.