ADVERTISEMENT

ಸೋಮೇಶ್ವರ, ಶಂಭುಲಿಂಗೇಶ್ವರ ರಥೋತ್ಸವ ಇಂದು

ಕಿಕ್ಕೇರಿ ಹೋಬಳಿಯ ಸಾಸಲು ಕ್ಷೇತ್ರದಲ್ಲಿ ಕಾರ್ಯಕ್ರಮ; ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ

ಕೆ.ವಿ.ಗೋವಿಂದರಾಜು
Published 29 ಏಪ್ರಿಲ್ 2019, 11:06 IST
Last Updated 29 ಏಪ್ರಿಲ್ 2019, 11:06 IST
ಕಿಕ್ಕೇರಿ ಹೋಬಳಿಯ ಸಾಸಲು ಕ್ಷೇತ್ರದ ಮೂಲದೇವರು ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ
ಕಿಕ್ಕೇರಿ ಹೋಬಳಿಯ ಸಾಸಲು ಕ್ಷೇತ್ರದ ಮೂಲದೇವರು ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ   

ಕಿಕ್ಕೇರಿ: ಬಯಲು ಸೀಮೆಯ ಕುಕ್ಕೆ, ಭವರೋಗ ನಿವಾರಕ ಸುಕ್ಷೇತ್ರ, ಭೈರವರಾಜರ ತಪೋಭೂಮಿ ಎಂದೇ ಪ್ರಸಿದ್ಧಿ ಪಡೆದ ಸಾಸಲು ಕ್ಷೇತ್ರದ ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ಜೋಡಿ ಬ್ರಹ್ಮ ರಥೋತ್ಸವ ಏ.29ರಂದು ಮಧ್ಯಾಹ್ನ ಅದ್ಧೂರಿಯಾಗಿ ನಡೆಯಲಿದೆ.

ರಾತ್ರಿ 8ಕ್ಕೆ ಸೋಮೇಶ್ವರ, ಶಂಭು ಲಿಂಗೇಶ್ವರ, ಕುದುರೆಮಂಡಮ್ಮ ಕೃಪಾ ಪೋಷಿತ ನಾಟಕ ಮಂಡಳಿಯಿಂದ ‘ಪಾಂಡವವಿಜಯ’ ನಾಟಕವಿದೆ.

ಸೌರಾಷ್ಟ್ರದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ ದೇವರ ದರ್ಶನಕ್ಕೆ ವಿವಿಧ ಕಡೆಗಳಿಂದ ಭಕ್ತರು ಬರುತ್ತಾರೆ.

ADVERTISEMENT

ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನದಲ್ಲಿ ಗ್ರಾಮಸ್ಥರು, ದಾನಿಗಳ ಸಹಾಯದಿಂದ ಸೋಮವಾರ, ಶನಿ ವಾರ ಅನ್ನ ದಾಸೋಹ ನಡೆಯುತ್ತದೆ.

ಸ್ಥಳ ಪುರಾಣ: ಈ ದೇವಸ್ಥಾನವನ್ನು 1043ರಲ್ಲಿ ಹೊಯ್ಸಳರ ದೊರೆ ತ್ರಿಭುವನಮಲ್ಲನ ಕಾಲದಲ್ಲಿ ನಿರ್ಮಿಸ ಲಾಗಿದೆ. ಆಂಧ್ರಪ್ರದೇಶದ ಮೋಪೂರಿನ ಭೈರವರಾಜರು ಸಾಸಲುವಿನ ಸೋಮೇಶ್ವರ ದರ್ಶನಕ್ಕೆ ಮಲ್ಲಿಪಟ್ಟಣದ ದೊರೆ ರಾಮ ರಾಜನೊಂದಿಗೆ ಬಂದು ದೇವರ ಮಹಿಮೆಗೆ ಮಾರುಹೋಗಿ ಇಲ್ಲಿಯೇ ನೆಲೆಸಿ ಜಂಗಮಧಾರಿ ಗಳಾಗಿರುವ ಉಲ್ಲೇಖವಿದೆ.

ರತ್ನ ವ್ಯಾಪಾರಿಯಾದ ಆದಿಶೆಟ್ಟಿ ವ್ಯಾಪಾರ ಮಾಡುತ್ತ ಈ ಕ್ಷೇತ್ರಕ್ಕೆ ಬಂದಾಗ ಜೈನರು ಸೋಮೇಶ್ವರನನ್ನು ತೋರಿಸಿ ಎಂದು ಮೂದಿಲಿಸುತ್ತಾರೆ. ಆದಿಶೆಟ್ಟಿ ಸೋಮೇಶ್ವರನನ್ನು ಕಾಣಲು ಸೋಮನಾಥ ಕ್ಷೇತ್ರಕ್ಕೆ ಪರ್ಯಟನೆ ಕೈಗೊಂಡಾಗ ಮಾರ್ಗಮಧ್ಯದಲ್ಲಿ ಸೋಮೇಶ್ವರನ ಅಶರೀರವಾಣಿ ಕೇಳುತ್ತದೆ. ಅದರ ಆಣತಿಯಂತೆ ಸೋಮವಾರ ಕ್ಷೇತ್ರಕ್ಕೆ ಬಂದು ನೋಡಿದಾಗ ಸೋಮೇಶ್ವರ ಲಿಂಗ ಮೂಡಿರುವುದು ಕಾಣುತ್ತದೆ. ನಂತರ ಜೈನರು ಸನಿಹದಲ್ಲಿರುವ ಶ್ರವಣ ಬೆಳಗೂಳಕ್ಕೆ ತೆರಳುತ್ತಾರೆ ಎಂಬ ಐತಿಹ್ಯವಿದೆ. ಅಂದಿನಿಂದ ಶ್ರವಣ ಬೆಳಗೂಳ ಜೈನಕಾಶಿಯಾದರೆ, ಸಾಸಲು ಕ್ಷೇತ್ರ ವೀರಶೈವರ ಕಾಶಿಯಾಗಿದೆ.

ಮತ್ತೋರ್ವ ವರ್ತಕ ಕೋರಿಶೆಟ್ಟಿ ಕ್ಷೇತ್ರದ ಹೊರವಲಯದಲ್ಲಿರುವ ತೋಪಿನಲ್ಲಿ ವಿಶ್ರಾಂತಿಗಾಗಿ ಬಿಡಾರ ಹೂಡಿರುತ್ತಾನೆ. ಉರುವಲಿಗಾಗಿ ಮರ ಕಡಿಯುವಾಗ ಪೊದೆಯಲ್ಲಿದ್ದ ಉದ್ಭವ ಶಂಭುಲಿಂಗ ಭಿನ್ನವಾಗಿ ರಕ್ತ ಚಿಮ್ಮಿ ಬಿಡಾರದಲ್ಲಿದ್ದ ಪರಿವಾರದ ದಂಡು ಮೃತಪಡುತ್ತಾರೆ. ಕನಸಿನಲ್ಲಿ ನೀಡಿದ ಶಿವನ ಅಪ್ಪಣೆಯಂತೆ ಶಂಭುಲಿಂಗೇಶ್ವರ ದೇಗುಲ ನಿರ್ಮಿಸಿ ಕ್ಷೇತ್ರದ ಮಹಿಮೆಗೆ ಕಾರಣರಾಗುತ್ತಾರೆ.

ಆದಿಶೆಟ್ಟಿ ನಿರ್ಮಿಸಿದ ದೇಗುಲದ ಸೋಮೇಶ್ವರನಿಗೆ ಸೋಮನಾಥ, ಸೋಮಲಿಂಗೇಶ್ವರ ಎಂದರೆ, ಕೋರಿಶೆಟ್ಟಿ ನಿರ್ಮಿಸಿದ ದೇಗುಲದ ಶಂಭುಲಿಂಗೇಶ್ವರನಿಗೆ ಜ್ಯೋರ್ತಿಲಿಂಗ, ಬೋಗೇಶ್ವರ ಎಂದು ಕರೆಯಲಾಗುತ್ತದೆ.

ಚರ್ಮವ್ಯಾಧಿ ಚಿಕಿತ್ಸಕ: ಭೈರವರಾಜರು ಕೈಲಾಸ ಸ್ವರೂಪಿಗಳಾಗಿ ಬಿಟ್ಟು ಹೋದ ವಿಭೂತಿಯಿಂದ ನಾಗರಹಾವು ಕಡಿತಕ್ಕೆ ನೀಡುವ ಔಷಧ, ಸರ್ಪಸುತ್ತು, ಕಜ್ಜಿ, ತುರಿಕೆಯಂತಹ ಹಲವು ಚರ್ಮ ವ್ಯಾಧಿಗಳಿಗೆ ದೇಗುಲದಲ್ಲಿ ನೀಡುವ ಔಷಧ, ವಿಭೂತಿ, ಬಿಲ್ಪಪತ್ರೆ ಪ್ರಸಾದ, ನಾಗಬನದಲ್ಲಿನ ಹುತ್ತದ ಮೃತ್ತಿಕೆ, ಸೋಮೇಶ್ವರ ಪುಷ್ಕರಣಿಯ ಸ್ನಾನಕ್ಕಾಗಿ ಸಾವಿರಾರು ಮಂದಿ ಬರುತ್ತಾರೆ.

ಮೂಲಸೌಕರ್ಯ ಒದಗಿಸಲು ಆಗ್ರಹ

ಸಾಸಲು ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ಕಜ್ಜಿ, ಸರ್ಪಸುತ್ತು, ಚರ್ಮವ್ಯಾಧಿ ನಿವಾರಣೆ ಯಾಗಲಿದೆ ಎಂಬ ನಂಬಿಕೆ ಇದೆ. ಈ ಕ್ಷೇತ್ರದಲ್ಲಿ ಭಕ್ತರಿಗೆ ಮೂಲ ಸೌಕರ್ಯದ ಕೊರತೆ ಇದೆ. ಸ್ನಾನಘಟ್ಟದ ಅಭಿವೃದ್ಧಿ, ರಥಬೀದಿಗೆ ಡಾಂಬರು, ತಂಗುದಾಣ, ಯಾತ್ರಿನಿವಾಸ, ರಾಜಗೋಪುರ, ಜೋಡಿರಥಗಳ ನವೀಕರಣ ಕಾರ್ಯವನ್ನು ಮುಜರಾಯಿ ಇಲಾಖೆ ಕೈಗೊಳ್ಳಬೇಕು ಎಂದು ಸಾಸಲು ಗ್ರಾಮದ ಕಾಯಿ ವ್ಯಾಪಾರಿ ಈರಾಜ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.