ನಾಗಮಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರಾಮನವಮಿಯ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ವಿವಿಧ ಗ್ರಾಮಗಳಲ್ಲಿರುವ ರಾಮಮಂದಿರ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷ ಅಲಂಕಾರ, ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು.
ಪಟ್ಟಣದ ಹಲ್ಲೇಸಳೆ ಆಂಜನೇಯ, ರಾಘವೇಂದ್ರ ಸ್ವಾಮಿ ದೇವಾಲಯ, ಉಪ್ಪಾರಹಳ್ಳಿ ಆಂಜನೇಯ ಸ್ವಾಮಿ ದೇವಾಲಯ ಮತ್ತು ರಾಮಮಂದಿರ ಸೇರಿದಂತೆ ಐತಿಹಾಸಿಕ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಕ್ರಮ ಜರುಗಿದವು. ಭಕ್ತರು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶ್ರೀರಾಮ ದೇವರ ಫೋಟೊ ಇಟ್ಟು ಭಕ್ತರು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.
ತಾಲ್ಲೂಕಿನ ಪುರಾಣ ಪ್ರಸಿದ್ಧ ಹದ್ದಿನಕಲ್ಲು ಮತ್ತು ಕಂಬದಹಳ್ಳಿ ಆಂಜನೇಯ ಸ್ವಾಮಿ ಬೆಟ್ಟಗಳಲ್ಲೂ ವಿಶೇಷ ಪೂಜೆ ಇದ್ದ ಕಾರಣ ಭಕ್ತರು ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದರು. ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ತಾಲ್ಲೂಕಿನ ಎಲ್ಲಾ ದೇವಾಲಯಗಳಲ್ಲೂ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ, ಹೆಸರುಬೇಳೆ, ಹಣ್ಣಿನ ರಸಾಯನ ಸೇರಿದಂತೆ ವಿವಿಧ ಬಗೆಯ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.