ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇ ದಾಟಲು ಸ್ಕೈ ವಾಕ್, ಸರ್ವೀಸ್ ರಸ್ತೆಗೆ ತಡೆಗೋಡೆ ಮತ್ತು ಗ್ರಾಮಗಳ ಬಳಿ ಒಳಚರಂಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಜನರು ಪಡಿಪಾಟಲು ಅನುಭವಿಸುತ್ತಿದ್ದಾರೆ.
ತಾಲ್ಲೂಕಿನ ಗಣಂಗೂರು ಬಳಿ ಸ್ಕೈ ವಾಕ್ ನಿರ್ಮಾಣ ಕಾರ್ಯ 6 ತಿಂಗಳ ಹಿಂದೆಯೇ ಆರಂಭವಾಯಿತು. ಒಂದೆಡೆಯಿಂದ ಇನ್ನೊಂದೆಡೆಗೆ ಎಕ್ಸ್‌ಪ್ರೆಸ್ ವೇ ದಾಟಲು ಸ್ಕೈ ವಾಕ್ ನಿರ್ಮಿಸುವ ಕೆಲಸ ಆರಂಭವಾದ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದೆ.
ತಾಲ್ಲೂಕಿನ ಗಡಿ ಭಾಗದ ರಾಗಿಮುದ್ದನಹಳ್ಳಿ ಬಳಿ ಕೂಡ ಸ್ಕೈ ವಾಕ್ ನಿರ್ಮಾಣ ಕಾರ್ಯಕ್ಕೆ ಗ್ರಹಣ ಹಿಡಿದಿದೆ. ಇದರಿಂದಾಗಿ ಜನರು ನಾಲ್ಕಾರು ಕಿ.ಮೀ. ದೂರ ಸುತ್ತಿ ಬಳಸಿ ಓಡಾಡುತ್ತಿದ್ದಾರೆ.
ತುರ್ತಾಗಿ ಎಕ್ಸ್‌ಪ್ರೆಸ್ ವೇ ದಾಟಬೇಕು ಎಂಬ ಧಾವಂತದಿಂದ ಕೆಲವು ಕಡೆ ಎಕ್ಸ್‌ಪ್ರೆಸ್ ವೇನ ಎರಡೂ ಬದಿಯಲ್ಲಿರುವ ಮೆಸ್ ಕಿತ್ತು ಹಾಕಿ ಕಿಂಡಿಗಳನ್ನು ಮಾಡಲಾಗಿದೆ. ಈ ಕಿಂಡಿಗಳ ಮೂಲಕವೇ ಜನರು ಓಡಾಡುತ್ತಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಪಟ್ಟಣ ಸಮೀಪದ ಗಂಜಾಂ ಬಳಿ ಎಕ್ಸ್‌ಪ್ರೆಸ್ ವೇಗೆ ಹೊಂದಿಕೊಂಡಂತೆ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಗೆ ಇನ್ನಾದರೂ ತಡೆಗೋಡೆ ನಿರ್ಮಿಸಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ತುಸು ಆಯ ತಪ್ಪಿದರೂ ಹಳ್ಳಕ್ಕೆ ಬೀಳುವ ಅಪಾಯವಿದೆ. ಈಗಾಗಲೇ ಎರಡು ಕಾರು, ಕೆಲವು ಬೈಕ್‌ಗಳು ಗುಂಡಿಗೆ ಬಿದ್ದಿವೆ.
ತಾಲ್ಲೂಕಿನ ಗಣಂಗೂರು ಬಳಿ, ಸರ್ವೀಸ್ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸುವ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ.
‘ಈ ಭಾಗದ ಎಕ್ಸ್‌ಪ್ರೆಸ್ ವೇ ಕಾಮಗಾರಿಯ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ವರ್ಗಾವಣೆಯಾದ ಬಳಿಕ ಇತರರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸೈಟ್ ಎಂಜಿನಿಯರ್ ಅರುಣ್ ಯಾರ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ’ ಎಂದು ನಗುವನಹಳ್ಳಿಯ ಎನ್. ಶಿವಸ್ವಾಮಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅರ್ಧಕ್ಕೆ ನಿಂತ ಕಾಮಗಾರಿ: ಪರದಾಟ
ಎಕ್ಸ್‌ಪ್ರೆಸ್ ವೇ ಕಾಮಗಾರಿ ಮುಗಿದು ವರ್ಷವೇ ಕಳೆದಿದೆ. ಆದರೆ ಇದಕ್ಕೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಗೆ ತಡೆಗೋಡೆ ಮತ್ತು ಗ್ರಾಮಗಳ ಬಳಿ ಚರಂಡಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ‘ನಗುವನಹಳ್ಳಿ ಗೇಟ್ ಬಳಿ ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಸಮಸ್ಯೆ ಹೇಳಿಕೊಳ್ಳಲು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾದರೆ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು’ ಎಂಬುದು ಪುರಸಭೆ ಮಾಜಿ ಅಧ್ಯಕ್ಷ ಗಂಜಾಂನ ಎಲ್. ನಾಗರಾಜು ಅವರ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.