ಶ್ರೀರಂಗಪಟ್ಟಣ/ ಮೈಸೂರು: ಕೃಷಿ ವಿಜ್ಞಾನಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ನಿವೃತ್ತ ನಿರ್ದೇಶಕ, ‘ಪದ್ಮಶ್ರೀ’ ಪುರಸ್ಕೃತ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ (70) ಅವರು ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಶನಿವಾರ ಮಧ್ಯಾಹ್ನ ಮೃತದೇಹವು ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
‘ಮೈಸೂರಿನ ವಿಶ್ವೇಶ್ವರನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯ ಮನೆಯಲ್ಲಿ ವಾಸವಿದ್ದರು. ಶ್ರೀರಂಗಪಟ್ಟಣದ ಸಾಯಿಬಾಬಾ ಆಶ್ರಮದ ಸಮೀಪ 3 ದಿನದ ಹಿಂದೆ ನದಿಗೆ ಹಾರಿದ್ದರು. ದಡದಲ್ಲಿ ಅವರ ಸ್ಕೂಟರ್ ಸಿಕ್ಕಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಮೇ 7ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟಿದ್ದಾರೆ’ ಎಂದು ಕುಟುಂಬದವರು ಮೈಸೂರಿನ ವಿದ್ಯಾರಣ್ಯಪುರಂ ಠಾಣೆಗೆ ದೂರು ನೀಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ’ ಎಂದು ಪೊಲೀಸರು ತಿಳಿಸಿದರು.
ಮೈಸೂರು–ಬೆಂಗಳೂರು ರಸ್ತೆಯ ವರ್ತುಲ ರಸ್ತೆ ಜಂಕ್ಷನ್‌ನಲ್ಲಿ ಅಯ್ಯಪ್ಪನ್ ಅವರು ಸ್ಕೂಟರ್‌ನಲ್ಲಿ ತೆರಳುವುನ್ನು ಪತ್ತೆಹಚ್ಚಿದ್ದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.
ಧ್ಯಾನಕ್ಕೆ ಹೋಗುತ್ತಿದ್ದರು
‘ಸುಬ್ಬಣ್ಣ ಅವರು ಮೈಸೂರಿನ ರಾಮಕೃಷ್ಣ ಆಶ್ರಮ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿ ತಟಕ್ಕೆ ಧ್ಯಾನ ಮಾಡಲು ಹೋಗುತ್ತಿದ್ದರು. ಅಲ್ಲಿಯೇ ಅವರ ಮೃತದೇಹ ಸಿಕ್ಕಿದೆ’ ಎಂದು ಸಂಬಂಧಿಕರಾದ, ವಕೀಲ ಶ್ರೀನಿಧಿ ತಿಳಿಸಿದ್ದಾರೆ.
ಪರಿಚಯ
ಅಯ್ಯಪ್ಪನ್ ಕೃಷಿ, ಮೀನುಗಾರಿಕಾ (ಅಕ್ವಾಕಲ್ಚರ್) ವಿಜ್ಞಾನಿಯಾಗಿ ದೆಹಲಿ, ಮುಂಬೈ, ಭೋಪಾಲ್ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಭಾರತದ ‘ನೀಲಿ ಕ್ರಾಂತಿ’ಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರಿಗೆ 2022ನೇ ಸಾಲಿನಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತ್ತು. ಕೃಷಿ ಕ್ಷೇತ್ರದ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದುಕೊಂಡೇ, ವಿವಿಧ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಹಿರಿಮೆ ಅವರದು. ಇಂಫಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ (ಸಿಎಯು) ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು.
1955ರ ಡಿ.10ರಂದು ಜನಿಸಿದ್ದ ಅವರು, ಚಾಮರಾಜನಗರ ಜಿಲ್ಲೆ ಯಳಂದೂರು ಮೂಲದವರು. ಮಂಗಳೂರಿನಲ್ಲಿ ಪದವಿ (ಬಿ.ಎಫ್.ಎಸ್‌ಸಿ–1975) ಹಾಗೂ ಸ್ನಾತಕೋತ್ತರ ಪದವಿ (ಎಂ.ಎಫ್.ಎಸ್‌ಸಿ– 1977) ವ್ಯಾಸಂಗ ಮಾಡಿದ್ದರು. 1998ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು. ಡಿಪಾರ್ಟ್‌ಮೆಂಟ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಆ್ಯಂಡ್ ಎಜುಕೇಷನ್‌ನ (ಡಿಎಆರ್‌ಇ) ಕಾರ್ಯದರ್ಶಿಯಾಗಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್) ವ್ಯವಸ್ಥಾಪಕ ನಿರ್ದೇಶಕ, ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿ ಅಧ್ಯಕ್ಷರಾಗಿದ್ದರು.
ಕೃಷಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅವರು ಹಲವು ಸಮಿತಿಗಳ ಅಧ್ಯಕ್ಷರಾಗಿದ್ದರು. ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.