ADVERTISEMENT

ಶ್ರೀರಂಗಪಟ್ಟಣ: ಶಾಲಾ ಕಟ್ಟಡ ಶಿಥಿಲ; ಆತಂಕದಲ್ಲಿ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2025, 12:44 IST
Last Updated 9 ಮೇ 2025, 12:44 IST
ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 80 ವರ್ಷಗಳಷ್ಟು ಹಳೆಯದಾದ ಕಟ್ಟಡ ಶಿಥಿಲವಾಗಿರುವುದು
ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 80 ವರ್ಷಗಳಷ್ಟು ಹಳೆಯದಾದ ಕಟ್ಟಡ ಶಿಥಿಲವಾಗಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ 80 ವರ್ಷಗಳಷ್ಟು ಹಳೆಯದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತೀರಾ ಶಿಥಿಲವಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆತಂಕ ಎದುರಾಗಿದೆ.

ಶಾಲಾ ಕಟ್ಟಡದ ಏಳೆಂಟು ಕೊಠಡಿಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಪೈಕಿ ಎರಡು ಕೊಠಡಿಗಳ ಚಾವಣಿಗಳು ಈಗಾಗಲೇ ಮುರಿದು ಬಿದ್ದಿವೆ. ಹೆಂಚುಗಳು ಉದುರಿವೆ. ತೊಲೆ ಮತ್ತು ರಿಪೀಸುಗಳು ಮುರಿದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಶಾಲಾ ಕಟ್ಟಡದ ಈ ದುಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. 5 ವರ್ಷಗಳ ಈಚೆಗೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ ಒಂದರಿಂದ 7ನೇ ತರಗತಿ ವರೆಗೆ 35 ವಿದ್ಯಾರ್ಥಿಗಳಿದ್ದಾರೆ.

‘ಪಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ ಇರುವ ವಿದ್ಯಾರ್ಥಿಗಳಿಗೆ ಹೊಸ ಕಟ್ಟಡದಲ್ಲಿ ಪಾಠ, ಪ್ರವಚನಗಳು ನಡೆಯುತ್ತಿವೆ. ಆದರೆ ಈ ಕೊಠಡಿಗಳಿಗೆ ಹೊಂದಿಕೊಂಡಂತೆ ಸುತ್ತಲೂ ಇರುವ ಹಳೆಯ ಕಟ್ಟಡ ಶಿಥಿಲವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯ ಆವರಣದಲ್ಲಿ ಓಡಾಡಲು ಭಯವಾಗುತ್ತಿದೆ. ಹಳೆಯ ಕಟ್ಟಡ ಯಾವ ಕ್ಷಣದಲ್ಲಿ ಕುಸಿದು ಬೀಳುತ್ತಿದೆಯೋ ಎಂಬ ಆತಂಕ ಶುರುವಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿ.ಕೆ. ಪುಷ್ಪಲತಾ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶಿಥಿಲ ಕಟ್ಟಡ ತೆರವು ಮಾಡುವಂತೆ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೂ ತೆರವು ಮಾಡಲು ಯಾವುದೇ ಕ್ರಮ ವಹಿಸಿಲ್ಲ’ ಎಂದು ‍ಪುಷ್ಪಲತಾ ಅಸಮಾಧಾನ ವ್ಯಕ್ತಪಡಿಸಿದರು.

‘ಪಾಲಹಳ್ಳಿ ಶಾಲೆಯ ಹಳೆಯ ಕಟ್ಟಡ ತೆರವು ಮಾಡಲು ಎರಡು ವರ್ಷಗಳ ಹಿಂದೆಯೇ ಆದೇಶ ಆಗಿದ್ದರೂ ಕಾರ್ಯಗತವಾಗಿಲ್ಲ. ಶಾಲಾಭಿವೃದ್ಧಿ ಸಮಿತಿಯಿಂದ ಮತ್ತೊಂದು ಪತ್ರ ಪಡೆದು ಲೋಕೋಪಯೋಗಿ ಇಲಾಖೆಗೆ ಕೋರಿಕೆ ಸಲ್ಲಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌. ಮಹೇಶ್ ತಿಳಿಸಿದ್ದಾರೆ.

ಹೇಳಿಕೆಯಲ್ಲಿ ಗೊಂದಲ:

ಶಾಲೆಯ ಶಿಥಿಲ ಕಟ್ಟಡ ತೆರವಿಗೆ ಪತ್ರ ಬರೆದಿದ್ದು, ಆದೇಶವೂ ಆಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್‌ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ. ‘ಪಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡ ತೆರವು ಕೋರಿ ಇದುವರೆಗೆ ಯಾವುದೇ ಪತ್ರ ಬಂದಿಲ್ಲ. ಮನವಿ ಸಲ್ಲಿಸಿದರೆ ಕ್ರಮ ವಹಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಎ ಜಸ್ವಂತ್‌ ಹೇಳಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಕೊಠಡಿಯೊಂದರ ಚಾವಣಿ ಮುರಿದು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.