ADVERTISEMENT

ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆಗೆ ಟೆಂಡರ್‌

ಅಕ್ರಮ ತಡೆಗೆ ಪುರಸಭೆ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 14:28 IST
Last Updated 27 ಜೂನ್ 2025, 14:28 IST
ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆಗೆ ಪ್ರಸಿದ್ಧವಾದ ಶ್ರದ್ಧಾ ಕೇಂದ್ರ ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ, ಇತರ ಕೈಂಕರ್ಯಗಳಿಗೆ ಸೇರಿರುವ ಜನ
ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆಗೆ ಪ್ರಸಿದ್ಧವಾದ ಶ್ರದ್ಧಾ ಕೇಂದ್ರ ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ, ಇತರ ಕೈಂಕರ್ಯಗಳಿಗೆ ಸೇರಿರುವ ಜನ   

ಶ್ರೀರಂಗಪಟ್ಟಣ: ಪಟ್ಟಣ ಹಾಗೂ ಆಸುಪಾಸಿನಲ್ಲಿ, ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗೆ ಪುರಸಭೆ ಇದೇ ಮೊದಲ ಬಾರಿಗೆ ಟೆಂಡರ್‌ ನಡೆಸಿದೆ.

ಪಟ್ಟಣದ ಪಶ್ಚಿಮವಾಹಿನಿ, ಸ್ನಾನ ಘಟ್ಟ, ಕಾವೇರಿ ಸಂಗಮ ಹಾಗೂ ದೊಡ್ಡ ಗೋಸಾಯಿಘಾಟ್ ಬಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಟೆಂಡರ್ ಕರೆದು ಜವಾಬ್ದಾರಿ ನೀಡಲಾಗಿದೆ. ಗುತ್ತಿಗೆದಾರರೊಬ್ಬರು ₹95 ಲಕ್ಷಕ್ಕೆ ಅಸ್ಥಿ ವಿಸರ್ಜನೆಯ ಟೆಂಡರ್‌ ಪಡೆದಿದ್ದಾರೆ. ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ಮಾಡಬೇಕು. ಅಧಿಕೃತ ಗುರುತಿನ ಚೀಟಿ ಹೊಂದಿರುವ ನೋಂದಾಯಿತ ಪುರೋಹಿತರು ಮಾತ್ರ ಅಸ್ಥಿ ವಿಸರ್ಜನೆ ಕೈಂಕರ್ಯಗಳನ್ನು ನಡೆಸಬೇಕು. ಪ್ರತಿ ಅಸ್ಥಿ ವಿಸರ್ಜನೆಗೆ ₹100 ಶುಲ್ಕ ಪಡೆಯಬೇಕು ಎಂದು ಟೆಂಡರ್‌ದಾರರಿಗೆ ಷರತ್ತು ವಿಧಿಸಲಾಗಿದೆ.

‘ಪಟ್ಟಣದ ಪಶ್ಚಿಮವಾಹಿನಿ ಇತರೆಡೆ ಅಸ್ಥಿ ವಿಸರ್ಜಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಆದರೆ ಅಸ್ಥಿ ವಿಸರ್ಜನೆಯ ಶುಲ್ಕದ ಹಣ ಸ್ವಚ್ಛತೆ, ಸಿಬ್ಬಂದಿಯ ಸಂಬಳಕ್ಕೂ ಸಾಲುತ್ತಿರಲಿಲ್ಲ. ಪುರಸಭೆಗೆ ಪ್ರತಿ ವರ್ಷ ₹7 ಲಕ್ಷ ನಷ್ಟ ಉಂಟಾಗುತ್ತಿತ್ತು. ಈ ನಷ್ಟ ತಪ್ಪಿಸಲು ಟೆಂಡರ್‌ ನಡೆಸಲಾಗಿದೆ. ಇನ್ನು ಮುಂದೆ ಅಸ್ಥಿ ವಿಸರ್ಜನೆ ಇತರ ಮೂಲಗಳಿಂದ ವಾರ್ಷಿಕ ₹1 ಕೋಟಿಗೂ ಹೆಚ್ಚು ಆದಾಯ ಬರಲಿದೆ’ ಎಂದು ಪುರಸಭೆ ಅಧ್ಯಕ್ಷ ಎಂ.ಎಲ್‌. ದಿನೇಶ್ ತಿಳಿಸಿದ್ದಾರೆ.

ADVERTISEMENT

ಅಸ್ಥಿ ವಿಸರ್ಜನೆ ಸ್ಥಳದಲ್ಲಿ ಫಲಕ ಹಾಕಬೇಕು. ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ಹೇಳಿದ್ದಾರೆ.

ಗುರುತಿನ ಚೀಟಿ ಹೊಂದಿರುವ ಅರ್ಚರು ಮಾತ್ರ ಅಸ್ಥಿ ವಿಸರ್ಜನೆಯ ಕಾರ್ಯ ನಡೆಸಬೇಕು. ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಟೆಂಡರ್‌ದಾರರಿಗೆ ದಂಡ ವಿಧಿಸಲಾಗುವುದು
ಎಂ. ರಾಜಣ್ಣ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.