ADVERTISEMENT

300 ವರ್ಷಗಳ ಹಿಂದೆಯೇ ಪೌರಾಡಳಿತ!

1948ರಿಂದ 2016ರವರೆಗೆ ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷರಾಗಿದ್ದವರ ವಿವರ ತೋರಿಸುವ ಫಲಕ

ಗಣಂಗೂರು ನಂಜೇಗೌಡ
Published 15 ಮೇ 2019, 18:23 IST
Last Updated 15 ಮೇ 2019, 18:23 IST
ಶ್ರೀರಂಗಪಟ್ಟಣದ ಪುರಸಭೆ ಕಚೇರಿ
ಶ್ರೀರಂಗಪಟ್ಟಣದ ಪುರಸಭೆ ಕಚೇರಿ   

ಶ್ರೀರಂಗಪಟ್ಟಣ: ಕೋಟೆ ನಾಡು ಶ್ರೀರಂಗಪಟ್ಟಣದಲ್ಲಿ 1948ರಲ್ಲಿ ಪುರಸಭೆ ಆಡಳಿತ ಆರಂಭವಾದರೂ ಇಲ್ಲಿ 17ನೇ ಶತಮಾನದಲ್ಲೇ ನಗರಾಡಳಿತ ವ್ಯವಸ್ಥೆಅಸ್ತಿತ್ವದಲ್ಲಿತ್ತು ಎಂಬುದು ವಿಶೇಷ.

ಚಿಕ್ಕದೇವರಾಜ ಒಡೆಯರ್ (1673-1704) ಆಡಳಿತ ಕಾಲದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ಬಂದಾಗ ರಚನೆಯಾದ ಅಠಾರ ಕಚೇರಿಯ ಆಡಳಿತ ಕೇಂದ್ರ ಈ ಪಟ್ಟಣದಲ್ಲಿತ್ತು. ಅದಕ್ಕೂ ಮೊದಲು ಕಂಠೀರವ ನರಸರಾಜ ಒಡೆಯರ್ (1638-59) ಕಾಲದಲ್ಲಿ ಇಲ್ಲಿನ ನಗರಾಡಳಿತ ನೋಡಿಕೊಳ್ಳಲು ಪಟ್ಟಣ ಚಾವಡಿ ಎಂಬ ಪ್ರತ್ಯೇಕ ಇಲಾಖೆಯೇ ಇತ್ತು.

ಪಟ್ಟಣದ ಅಭಿವೃದ್ಧಿ, ಕಾನೂನು ವ್ಯವಸ್ಥೆ ಮತ್ತು ಕೋಟೆ, ಕೊತ್ತಲಗಳ ಸಂರಕ್ಷಣೆಯ ಸಂಪೂರ್ಣ ಹೊಣೆಗಾರಿಕೆ ಈ ಇಲಾಖೆಯದ್ದಾಗಿತ್ತು. ಕಂಠೀರವ ನರಸರಾಜ ಒಡೆಯರ್ ಆಳ್ವಿಕೆಯಲ್ಲಿ ಲಿಂಗೇಗೌಡ ಎಂಬಾತ ನಗರಾಡಳಿತ ನೋಡಿಕೊಳ್ಳುತ್ತಿದ್ದ ಎಂದು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅಧೀಕ್ಷಕರಾಗಿದ್ದ ದಿವಂಗತ ಡಾ.ಎ. ಸತ್ಯನಾರಾಯಣ್ ಉಲ್ಲೇಖಿಸಿದ್ದಾರೆ.

ADVERTISEMENT

ಪಟ್ಟಣ ವ್ಯಾಪ್ತಿಯ ಕಂದಾಯ ವಸೂಲಿಗಾಗಿ ತೊದೆಯ ಚಾವಡಿ ಎಂಬ ವಿಭಾಗ ಕೆಲಸ ಮಾಡುತ್ತಿತ್ತು. ಈ ವಿಭಾಗದಿಂದ ಧಾನ್ಯ ಮತ್ತು ನಗದು ರೂಪದಲ್ಲಿ ಕಂದಾಯ ಸಂಗ್ರಹವಾಗುತ್ತಿತ್ತು. ಈ ದ್ವೀಪ ಪಟ್ಟಣದಲ್ಲಿದ್ದ ಅರಮನೆಯ ಲೆಕ್ಕಪತ್ರ ನೋಡಿಕೊಳ್ಳಲು ಸಮ್ಮಖದ ಚಾವಡಿ ಎಂಬ ಪ್ರತ್ಯೇಕ ಇಲಾಖೆ ಕಾರ್ಯ ನಿರ್ವಹಿಸುತ್ತಿತ್ತು. ನಾಣ್ಯ ಮುದ್ರಣ ಕೂಡ ಈ ಪಟ್ಟಣದಲ್ಲಿ ನಡೆಯುತ್ತಿತ್ತು. ಪಟ್ಟಣದಿಂದ ಕೊಯಮತ್ತೂರು, ಸೇಲಂ, ಮಧುರೈಗಳಿಗಿದ್ದ ಸಾರಿಗೆ ವ್ಯವಸ್ಥೆ ನೋಡಿಕೊಳ್ಳುವ ಉಸ್ತುವಾರಿ ಅಧಿಕಾರಿಯೂ ಇಲ್ಲಿದ್ದ ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

1948ರ ನಂತರ: ಪಟ್ಟಣದಲ್ಲಿ 1948ರಲ್ಲಿ ಪುರಸಭೆ ಆಡಳಿತಅಸ್ತಿತ್ವಕ್ಕೆ ಬರುವ ಮುನ್ನ ಅಧಿಕಾರಿಯೊಬ್ಬರು ಆಡಳಿತ ನೋಡಿಕೊಳ್ಳುತ್ತಿದ್ದರು. 1948ರಲ್ಲಿ ಚುನಾವಣೆ ನಡೆದು ಡಾ.ಸಿ. ಬಂದೀಗೌಡ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಬಿ.ಕೆ. ಅಣ್ಣೇಗೌಡ ಎರಡು ಅವಧಿಗೆ ಅಂದರೆ ಒಟ್ಟು 10 ವರ್ಷಗಳವರೆಗೆ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 71 ವರ್ಷಗಳ ಅವಧಿಯಲ್ಲಿ 23 ಮಂದಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಬಿ.ಎಸ್. ಕೊದಂಡರಾಂ, ಎನ್. ಶ್ರೀಕಂಠಯ್ಯ, ಬಿ. ಬೋರೇಗೌಡ, ಡಾ.ಎಸ್. ಮಾಯಣ್ಣ, ಬಿ.ಆರ್. ಸೂರ್ಯನಾರಾಯಣ ರಾವ್, ನರಸಿಂಹಸ್ವಾಮಿ, ಎನ್. ಗಂಗಾಧರ್, ಎಸ್. ಜಯರಾಂ, ಎನ್. ಮಹೇಶ್, ಕೆ. ಬಲರಾಮು, ಆರ್. ಕೃಷ್ಣ, ಶೀಲಾ ನಂಜುಂಡಯ್ಯ, ಕಲ್ಪನಾ ಶಂಕರ್, ಎಸ್. ಕೋದಂಡರಾಮ, ಕಮಲಮ್ಮ ಚನ್ನೇಗೌಡ, ರಾಧಾ ಶ್ರೀಕಂಠು, ಎಲ್. ನಾಗರಾಜು, ಎಸ್. ಶಿವಾಜಿರಾವ್, ಭಾಗ್ಯಮ್ಮ ಕೃಷ್ಣಪ್ಪ, ಎಂ. ಸುಮಾ ಶೇಖರ್ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

13 ವರ್ಷ ಆಡಳಿತಾಧಿಕಾರಿ ಆಡಳಿತ

1970ರಿಂದ 1979ರ ವರೆಗೆ, ಮೇ 1995ರಿಂದ ಜ. 1996ರವರೆಗೆ, 2013ರ ಫೆಬ್ರುವರಿಯಿಂದ 2014ರ ಮಾರ್ಚ್‌ವರೆಗೆ ಮತ್ತು 2016ರ ಸೆಪ್ಟೆಂಬರ್‌ನಿಂದ ಈವರೆಗೆ ಒಟ್ಟು 13 ವರ್ಷಗಳ ಕಾಲ ಆಡಳಿತಾಧಿಕಾರಿಯ ಆಡಳಿತವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.