ADVERTISEMENT

10ಕ್ಕೂ ಹೆಚ್ಚು ಜಲ್ಲಿ ಕ್ರಷರ್‌ಗಳು ಬಂದ್‌

ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ, ಮೂಕಪ್ರೇಕ್ಷಕರಾದ ಮಾಲೀಕರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 10:48 IST
Last Updated 23 ನವೆಂಬರ್ 2019, 10:48 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮುಂಡುಗದೊರೆ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ನಡೆಯುತ್ತಿದ್ದ ಜಲ್ಲಿ ಕ್ರಷರ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಯಂತ್ರದ ಸಹಾಯದಿಂದ ಬಂದ್‌ ಮಾಡಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಮುಂಡುಗದೊರೆ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ನಡೆಯುತ್ತಿದ್ದ ಜಲ್ಲಿ ಕ್ರಷರ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಯಂತ್ರದ ಸಹಾಯದಿಂದ ಬಂದ್‌ ಮಾಡಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಮುಂಡುಗದೊರೆ ಸೇರಿದಂತೆ ವಿವಿಧೆಡೆ ಅರಣ್ಯ ಭೂಮಿಯಲ್ಲಿ ನಡೆಯುತ್ತಿದ್ದ 10ಕ್ಕೂ ಹೆಚ್ಚು ಜಲ್ಲಿ ಕ್ರಷರ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂದ್‌ ಮಾಡಿಸಿದರು.

ಜೆಸಿಬಿ ಯಂತ್ರದ ಸಹಾಯದಿಂದ ಕ್ರಷರ್‌ಗಳ ಬಂಕರ್‌ಗಳನ್ನು ನಾಶ ಪಡಿಸಿದರು. ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದರು. ವಿರೋಧ ವ್ಯಕ್ತಪಡಿಸಿದರೆ ಪ್ರಕರಣ ದಾಖಲಿಸುವುದಾಗಿ ವಲಯ ಅರಣ್ಯಾಧಿಕಾರಿ ಅನಿತಾ ಎಚ್ಚರಿಸಿದರು. ಹಾಗಾಗಿ ಗುಂಪುಗೂಡಿದ್ದ ಕ್ರಷರ್‌ಗಳ ಮಾಲೀಕರು ಹಾಗೂ ಕಾರ್ಮಿಕರು ಚದುರಿ ಹೋದರು.

ಕ್ರಷರ್‌ಗಳ ಹತ್ತಿರದಲ್ಲೇ ಇದ್ದ ಕೆಲವರು ಮೂಕ ಪ್ರೇಕ್ಷಕರಾಗಿದ್ದರು.

ADVERTISEMENT

‘ಮುಂಡುಗದೊರೆ ಮತ್ತು ಹಂಗರಹಳ್ಳಿ ವ್ಯಾಪ್ತಿಯಲ್ಲಿ ಡೈಮಂಡ್‌ ಸ್ಟೋನ್‌ ಕ್ರಷರ್‌, ಪ್ರೈಮ್‌ ಕ್ರಷರ್‌, ಚೆಲುವರಾಯಸ್ವಾಮಿ ಕ್ರಷರ್‌, ಸುಬ್ರಹ್ಮಣ್ಯೇಶ್ವರ ಕ್ರಷರ್‌, ಸಿದ್ದೇಶ್ವರ ಸ್ಟೋನ್‌ ಕ್ರಷರ್‌, ವಲ್ಲಿ ಕ್ರಷರ್‌, ಶಿವಕುಮಾರ್‌ ಕ್ರಷರ್‌, ಕಾಂತರಾಜು ಕ್ರಷರ್‌, ಕೆಟಿಆರ್‌ ಕ್ರಷರ್‌, ರಾಬಿನ್‌ ಜಲ್ಲಿ ಕ್ರಷರ್‌ ಸೇರಿದಂತೆ ಇತರ ಕ್ರಷರ್‌ಗಳು ಅರಣ್ಯ ಭೂಮಿಯಲ್ಲಿ
ಅನಧಿಕೃತವಾಗಿ ನಡೆಯುತ್ತಿವೆ. ಚಾಲನೆಯಲ್ಲಿರುವ ಎಲ್ಲ ಅನಧಿಕೃತ ಜಲ್ಲಿ ಕ್ರಷರ್‌ಗಳನ್ನು ಬಂದ್‌ ಮಾಡಲಾಗುತ್ತಿದೆ’ ಎಂದು ಆರ್‌ಎಫ್‌ಒ ಅನಿತಾ ಹೇಳಿದರು.

ಮುಂಡುಗದೊರೆ ವ್ಯಾಪ್ತಿಯ ಸರ್ವೆ ನಂ. 351 ಹಾಗೂ ಹಂಗರಹಳ್ಳಿ ವ್ಯಾಪ್ತಿಯ ಸರ್ವೆ ನಂ. 185ರಲ್ಲಿ 2013ರಿಂದ ಅನಧಿಕೃತವಾಗಿ ಜಲ್ಲಿ ಕ್ರಷರ್‌ಗಳು ನಡೆಯುತ್ತಿದ್ದ ಬಗ್ಗೆ ವರದಿ ಮಾಡಲಾಗಿತ್ತು. ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ ನಡೆಸುತ್ತಿದ್ದ ಹಲವರ ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಆದರೂ ಜಲ್ಲಿ ಕ್ರಷರ್‌ಗಳು ನಡೆಯುತ್ತಿದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇರುವ ಅಧಿಕಾರವನ್ನು
ಬಳಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಆರ್‌ಎಫ್‌ ಆನಂದೇಗೌಡ ತಿಳಿಸಿದರು.

‘ಪ್ರಭಾವಕ್ಕೆ ಮಣಿಯುವುದಿಲ್ಲ’

‘ಅನಧಿಕೃತ ಜಲ್ಲಿ ಕ್ರಷರ್‌ಗಳನ್ನು ಬಂದ್‌ ಮಾಡಿಸುವ ವಿಷಯದಲ್ಲಿ ಯಾರ ಪ್ರಭಾವಕ್ಕೂ ಮಣಿಯುವುದಿಲ್ಲ. ರಾಜಕಾರಣಿಗಳು ಅಥವಾ ಅವರ ಬೆಂಬಲಿಗರದ್ದೇ ಆದರೂ ಕ್ರಮ ಕೈಗೊಳ್ಳುತ್ತೇವೆ. ಆದರೆ, ಸಿ–1 ಮತ್ತು ಬಿ–1 ಪಡೆದಿರುವ ಕ್ರಷರ್‌ಗಳನ್ನು ಬಂದ್‌ ಮಾಡಿಸುವ ಅಧಿಕಾರ ನಮಗೆ ಇಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರಭಾವಿಗಳ ಕ್ರಷರ್‌ ಮುಚ್ಚಿಲ್ಲ: ಆರೋಪ‌

ಅರಣ್ಯ ಇಲಾಖೆ ಅಧಿಕಾರಿಗಳು ಕೆಲವೇ ಜಲ್ಲಿ ಕ್ರಷರ್‌ಗಳನ್ನು ಬಂದ್‌ ಮಾಡಿಸಿದ್ದಾರೆ. ಪ್ರಭಾವಿಗಳು ಹಾಗೂ ಅವರ ಸಂಪರ್ಕ ಇರುವವರ ಕ್ರಷರ್‌ಗಳನ್ನು ಹಾಗೇ ಬಿಟ್ಟಿದ್ದಾರೆ. ನೂರಾರು ಮಂದಿ ಜಲ್ಲಿ ಕ್ರಷರ್‌ ನೆಚ್ಚಿಕೊಂಡಿದ್ದಾರೆ. ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಕೂಲಿ ಕಾರ್ಮಿಕರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.