ADVERTISEMENT

SSLC: ಮಂಡ್ಯ- ಮೂವರಿಗೆ 625, ಏಳು ಮಂದಿಗೆ 624 ಅಂಕ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ; ಎ ಗ್ರೇಡ್‌ ಪಡೆದ ಜಿಲ್ಲೆ, ಶೇ 94.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:25 IST
Last Updated 19 ಮೇ 2022, 13:25 IST
ಕೆ.ಎಂ.ಗಗನ್‌
ಕೆ.ಎಂ.ಗಗನ್‌   

ಬ್ಲಾಕ್‌ವಾರು ಫಲಿತಾಂಶದ ವಿವರ

ಬ್ಲಾಕ್‌; ಪರೀಕ್ಷೆ ಬರೆದವರು; ಉತ್ತೀರ್ಣ; ಶೇ
ಕೆ.ಆರ್‌.ಪೇಟೆ; 2647; 2550; 96.34
ಮದ್ದೂರು; 3377; 3311; 98.05
ಮಳವಳ್ಳಿ; 3137; 2998; 95.57
ಮಂಡ್ಯ ದಕ್ಷಿಣ: 3212; 2879; 89.63
ಮಂಡ್ಯ ಉತ್ತರ; 1314; 1251; 95.21
ನಾಗಮಂಗಲ: 2223; 2129; 95.77
ಪಾಂಡವಪುರ; 2238; 2130; 95.17
ಶ್ರೀರಂಗಪಟ್ಟಣ; 1929; 1764; 91.4
ಒಟ್ಟು; 20077; 19012; 94.70

ಮಂಡ್ಯ: ಜಲ್ಲೆಯ ಮೂವರು ವಿದ್ಯಾರ್ಥಿಗಲೂ 625ಕ್ಕೆ 625 ಅಂಕ ಪಡೆದಿದ್ದರೆ 7 ಮಂದಿ 624, 17 ಮಂದಿ 623 ಅಂಕ ಪಡೆದಿದ್ದಾರೆ. ಒಟ್ಟಾರೆ ಜಿಲ್ಲೆಗೆ ಎ ಶ್ರೇಣಿ ಫಲಿತಾಂಶ ಬಂದಿದ್ದು ಶೇ 94.70ರಷ್ಟು ವಿದ್ಯಾರ್ಥಿಗಳ ಉತ್ತೀರ್ಣರಾಗಿದ್ದಾರೆ.

ADVERTISEMENT

ಮಳವಳ್ಳಿ ತಾಲ್ಲೂಕು ಅನಿತಾ ಪ್ರೌಢಶಾಲೆ ವಿದ್ಯಾರ್ಥಿ ಕೆ.ಎಂ.ಗಗನ್‌, ರೋಟರಿ ಪ್ರೌಢಶಾಲೆ ವಿದ್ಯಾರ್ಥಿ ಎಂ.ಎನ್‌.ಸೂರಜ್‌ಗೌಡ, ಶ್ರೀರಂಗಪಟ್ಟಣ ತಾಲ್ಲೂಕು ಮೊಗರಹಳ್ಳಿಯ ಮಹಾಲಕ್ಷ್ಮಿ ಪ್ರೌಢಶಾಲೆ ವಿದ್ಯಾರ್ಥಿನಿ ಎಚ್‌.ಎಸ್‌.ಅಪೂರ್ವ 626ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಿಕ್ಷಣ ಇಲಾಖೆ ಈ ಬಾರಿ ಜಿಲ್ಲೆಗಳಿಗೆ ಸ್ಥಾನ ನೀಡಿಲ್ಲ. ಎ ಶ್ರೇಣಿ ಪಡೆದ ಜಿಲ್ಲೆಯ 32 ಜಿಲ್ಲೆಗಳ ಪಟ್ಟಿಯಲ್ಲಿ ಮಂಡ್ಯ ಜಿಲ್ಲೆಯೂ ಸ್ಥಾನ ಪಡೆದಿದೆ.

ಸ್ಥಳೀಯವಾಗಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು, ಉತ್ತೀರ್ಣರಾದ ವಿದ್ಯಾರ್ಥಿಗಳ ಆಧಾರದ ಮೇಲೆ 94.70ರಷ್ಟು ಶೇಕಡಾವಾರು ಫಲಿತಾಂಶ ಜಿಲ್ಲೆಗೆ ಬಂದಿದೆ. ಪರೀಕ್ಷೆ ಬರೆದ ಒಟ್ಟು 20,077 ವಿದ್ಯಾರ್ಥಿಗಳಲ್ಲಿ 19,012 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮದ್ದೂರು ಬ್ಲಾಕ್‌ ಶೇ 98.05ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಮಂಡ್ಯ ದಕ್ಷಿಣ ಬ್ಲಾಕ್‌ನಲ್ಲಿ ಶೇ 89.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕೊನೆಯ ಸ್ಥಾನ ಪಡೆದಿದೆ.

ಕಳೆದ ವರ್ಷ ಜಿಲ್ಲೆಗಳಿಗೆ ಸ್ಥಾನ ನೀಡಿದ್ದ ಕಾರಣ ಮಂಡ್ಯ ಜಿಲ್ಲೆಗೆ 4ನೇ ಸ್ಥಾನ ಸಿಕ್ಕಿತ್ತು, 2018ನೇ ಸಾಲಿನಲ್ಲಿ ಜಿಲ್ಲೆ 10ನೇ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶವನ್ನು ಗುಣಾತ್ಮಕವಾಗಿ ವಿಶ್ಲೇಷಣೆ ನಡೆಸಿ ಶ್ರೇಣಿ ನೀಡಲಾಗಿದೆ. ಶೇ 75ರಿಂದ ಶೇ 100ರಷ್ಟು ಫಲಿತಾಂಶ ಪಡೆದ ಜಿಲ್ಲೆಗಳಿಗೆ ಎ ಶ್ರೇಣಿ, ಶೇ 60ರಿಂದ ಶೇ 75ರಷ್ಟು ಫಲಿತಾಶ ಪಡೆದ ಜಿಲ್ಲೆಗಳಿಗೆ ಬಿ ಶ್ರೇಣಿ ನೀಡಲಾಗಿದೆ.

‘ಫಲಿತಾಂಶದ ವಿಷಯದಲ್ಲಿ ಆರೋಗ್ಯಕರವಾದ ಸ್ಪರ್ಧೆ ಇರಬೇಕು ಎಂಬ ಕಾರಣಕ್ಕಾಗಿ ಸ್ಥಾನ ನೀಡುವ ಬದಲು ಈ ಬಾರಿ ಶ್ರೇಣಿ ನೀಡಲಾಗಿದೆ. ಸ್ಥಾನ ಪಡೆಯುವುದಕ್ಕಾಗಿ ಹಲವು ಜಿಲ್ಲೆಗಳಲ್ಲಿ ಅಕ್ರಮ ನಡೆಸಿದ್ದನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಅನುಸರಿಸಲಾಗಿದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಆರಂಭದಲ್ಲಿ ಕೋವಿಡ್‌ ಭೀತಿ: ಶೈಕ್ಷಣಿಕ ವರ್ಷ ಆರಂಭವಾದಾಗ ಮಕ್ಕಳಿಗೆ, ಪೋಷಕರಿಗೆ ಕೋವಿಡ್‌ ಭಯ ಮನೆ ಮಾಡಿತ್ತು. ಸಾಮಾನ್ಯವಾಗಿ ಮೇ–ಜೂನ್‌ನಲ್ಲಿ ಶಾಲೆಗಳು ಆರಂಭವಾಗಬೇಕಾಗಿತ್ತು. ಆದರೆ ಕೋವಿಡ್‌ ಭೀತಿ ಇದ್ದ ಕಾರಣ ಶಾಲೆಗಳು ಜುಲೈ ತಿಂಗಳಲ್ಲಿ ಆರಂಭಗೊಂಡಿದ್ದವು. ಪಠ್ಯಕ್ರಮ ಬೋಧನೆ ಪೂರ್ಣಗೊಳಿಸುವುದಕ್ಕಾಗಿ ಶಿಕ್ಷಕರು ತ್ವರಿತಗತಿ ಕ್ರಮ ಕೈಗೊಂಡಿದ್ದರು. ಅದು ಫಲ ಕೊಟ್ಟಿದ್ದು ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.

‘ಆರಂಭದಲ್ಲಿ ಕೊಂಚ ಕೋವಿಡ್‌ ಭಯವಿತ್ತು, ಆದರೆ ನಂತರ ಶಿಕ್ಷಕರು ಮಕ್ಕಳನ್ನು ಉತ್ತಮವಾಗಿ ತಯಾರಿಗೊಳಿಸಿದರು. ಮಕ್ಕಳು ಯಾವುದೇ ಭಯವಿಲ್ಲದೇ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಭರವಸೆ ಮೂಡಿಸಲಾಯಿತು. ಮಕ್ಕಳ ಸಾಧನೆ ತೃಪ್ತಿತಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಎಸ್‌.ಜವರೇಗೌಡ ತಿಳಿಸಿದರು.

***********

ನಮ್ಮ ತಂದೆ ಗಾರೆ ಕೆಲಸ ಮಾಡಿಕೊಂಡು ಓದಿಸಿದ್ದಾರೆ. ಡಾಕ್ಟರ್‌ ಆಗಿ ಬಡ ಜನರಿಗೆ ಚಿಕಿತ್ಸೆ ನೀಡಬೇಕು ಎಂಬುದು ನನ್ನ ಆಸೆ ಇದೆ. ಉತ್ತಮ ಅಂಕಗಳು ಬರುತ್ತವೆ ಎಂಬ ವಿಶ್ವಾಸ ನನ್ನಲ್ಲಿ ಇತ್ತು. ಪಿಯುಸಿಯಲ್ಲೂ ಹೆಚ್ಚು ಅಂಕ ಪಡೆಯಲು ಯತ್ನಿಸುತ್ತೇನೆ
–ಎಚ್‌.ಎಸ್‌.ಅಪೂರ್ವ, ಮೊಗರಹಳ್ಳಿ ಮಹಾಲಕ್ಷ್ಮಿ ಪ್ರೌಢಶಾಲೆ ವಿದ್ಯಾರ್ಥಿನಿ


620 ಅಂಕ ನಿರೀಕ್ಷೆ ಮಾಡಿದ್ದೆ, ಆದರೆ ಶೇ 100ರಷ್ಟು ಅಂಕ ಬಂದಿರುವುದು ಅಚ್ಚರಿ ಮತ್ತು ಬಹಳ ಖುಷಿ ತಂದಿದೆ. ನಮ್ಮ ಮಾವ ಸಾಕಷ್ಟು ಸಲಹೆ ನೀಡುತ್ತಿದ್ದರು. ಫಲಿತಾಂಶದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮುಂದಿನ ದಿನಗಳಲ್ಲಿ ಸ್ವರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುವೆ
–ಎಂ.ಎನ್.ಸೂರಜ್ ಗೌಡ, ಮಳವಳ್ಳಿ ರೋಟರಿ ಶಾಲೆ

ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿತ್ತು, ಆದರೆ 625 ಅಂಕ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ, ಗಂಟೆಗೆ ಒಂದು ವಿಷಯದಂತೆ ನಿತ್ಯ 6 ಗಂಟೆ ಅಭ್ಯಾಸ ಮಾಡುತ್ತಿದೆ. ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ಹಾಗೂ ಪೋಷಕರ ಸಹಕಾರದಿಂದ ಶೇ 100ರಷ್ಟು ಫಲಿತಾಂಶ ಪಡೆದಿದರುವೆ. ವೈದ್ಯನಾಗುವ ಕನಸಿದೆ.
– ಕೆ.ಎಂ.ಗಗನ್, ಮಳವಳ್ಳಿ ಅನಿತಾ ಕಾನ್ವೆಂಟ್

****

196 ಶಾಲೆಗಳು ಶೇ 100 ಸಾಧನೆ

ಜಿಲ್ಲೆಯ 196 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಕೆ.ಆರ್‌.ಪೇಟೆ ಬ್ಲಾಕ್‌ನ 27, ಮದ್ದೂರು 61, ಮಳವಳ್ಳಿ 23, ಮಂಡ್ಯ ದಕ್ಷಿಣ 17, ಮಂಡ್ಯ ಉತ್ತರ 13, ನಾಗಮಂಗಲ 20, ಪಾಂಡವಪುರ 22, ಶ್ರೀರಂಗಪಟ್ಟಣದ 13 ಶಾಲೆಗಳು ಶೇ 100ಷ್ಟು ಫಲಿತಾಂಶ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.