ADVERTISEMENT

ಮಾರ್ಚ್ 7ರಿಂದ ಮಂಡ್ಯದಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ

‘ಗಟ್ಟಿ ದನಿ, ದಿಟ್ಟ ನಡೆ, ಘನತೆವೆತ್ತ ಬದುಕು’ ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 13:40 IST
Last Updated 29 ಫೆಬ್ರುವರಿ 2020, 13:40 IST
ಮಹಿಳಾ ಸಮಾವೇಶದ ಲಾಂಛನ
ಮಹಿಳಾ ಸಮಾವೇಶದ ಲಾಂಛನ   

ಮಂಡ್ಯ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಇತರ 50ಕ್ಕೂ ಹೆಚ್ಚು ಸಂಘಟನೆಗಳ ಸಹಭಾಗಿತ್ವದಲ್ಲಿ ಮಾ.7, 8ರಂದು ‘ಗಟ್ಟಿ ದನಿ, ದಿಟ್ಟ ನಡೆ, ಘನತೆವೆತ್ತ ಬದುಕು’ ಎಂಬ ಘೋಷಣೆಯೊಂದಿಗೆ ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಯಲಿದೆ.

‘2013ರಿಂದ ರಾಜ್ಯದ ವಿವಿಧೆಡೆ ಮಹಿಳಾ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ಕಳೆದ ವರ್ಷ ಧಾರವಾಡದಲ್ಲಿ ಸಮಾವೇಶ ನಡೆದಿತ್ತು. ಮಾ.7ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ, ಮಾ.8ರಂದು ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ’ ಎಂದು ಒಕ್ಕೂಟದ ಸದಸ್ಯೆ, ರೈತ ನಾಯಕಿ ಸುನಂದಾ ಜಯರಾಂ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವತಿಯಿಂದ ಮಾ.7ರಂದು ಬೆಳಿಗ್ಗೆ 10.30ಕ್ಕೆ ‘ಮಹಿಳೆಯರ ಬದುಕು: ಪಲ್ಲಟಗಳು’ ವಿಷಯ ಕುರಿತು ಹೈದರಾಬಾದ್‌ನ ಚಿಂತಕಿ ವೋಲ್ಗಾ ವಿಚಾರ ಮಂಡಿಸಲಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಬರುವ ಚಿಂತಕಿಯರು, ಹೋರಾಟಗಾರ್ತಿಯರು ಸಂವಾದ ನಡೆಸಲಿದ್ದಾರೆ’ ಎಂದರು.

ADVERTISEMENT

‘ಸಂಜೆ 6 ಗಂಟೆಗೆ ನಗರದ ಸಂಜಯ ವೃತ್ತದಲ್ಲಿ ‘ಕಪ್ಪುಡುಗೆಯಲ್ಲಿ ಮಹಿಳೆಯರು’ ಮೌನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ‘ಸರ್ವ ಜನಾಂಗದ ಶಾಂತಿಯ ದೇಶ’ ಎಂಬ ಘೋಷ ವಾಕ್ಯದೊಂದಿಗೆ ಜಾಥಾ ನಡೆಸಲಾಗುವುದು’ ಎಂದರು.

‘ಮಾ.8ರಂದು ಬೆಳಿಗ್ಗೆ 10ಕ್ಕೆ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಿಲ್ವರ್ ಜ್ಯೂಬಿಲಿ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದೆ. ಉದ್ಯಾನದಲ್ಲಿ ಬೃಹತ್‌ ಮಹಿಳಾ ಸಮಾವೇಶ ನಡೆಯಲಿದ್ದು ದೆಹಲಿಯ ಸಾಮಾಜಿಕ ಕಾರ್ಯಕರ್ತೆ ಶಬ್ನಂ ಹಶ್ಮಿ ಮಾತನಾಡಲಿದ್ದಾರೆ. ಅಂದಿನ ಸಮಾವೇಶದಲ್ಲಿ ವಿವಿಧ ಹಕ್ಕೊತ್ತಾಯ ಮಂಡಿಸಲಾಗುವುದು. ಸಂಜೆ 4ರಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿವೆ’ ಎಂದರು.

‘ಜಾತಿ, ಧರ್ಮ, ಭಾಷೆ, ಗಡಿಗಳ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಹಿಂಸೆ, ಅತ್ಯಾಚಾರಗಳು ನಿಲ್ಲಬೇಕು. ಸರ್ವರ ಸಮಾನತೆ, ಏಳಿಗೆಯನ್ನು ಸಾಧಿಸಲು ಹಲವು ಪರಿಣಾಮಕಾರಿ ಕ್ರಮ ರೂಪಿಸಬೇಕು ಎಂಬ ಉದ್ದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಲೇಖಕಿಯರು, ಮಹಿಳಾ ಚಿಂತಕಿಯರು ಭಾಗವಹಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.