ADVERTISEMENT

ಕಾಮಗಾರಿ ನಿಲ್ಲಿಸಿ ನಾಲೆಗಳಿಗೆ ನೀರು: ಸಚಿವ ಚಲುವರಾಯಸ್ವಾಮಿ ಹೇಳಿಕೆ

ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:42 IST
Last Updated 22 ಜುಲೈ 2025, 2:42 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿದರು   

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ಕೆಲವು ನಾಲೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂಗಾರು ಹಂಗಾಮು ಬೆಳೆಗೆ ನೀರು ಕೊಡುವ ಉದ್ದೇಶದಿಂದ ಕಾಮಗಾರಿ ನಿಲ್ಲಿಸಿ ಕಾಲುವೆಗಳಿಗೆ ನೀರು ಹರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘ಬೆಳೆಗೆ ನೀರು ಕೊಡುವ ಜತೆಗೆ ರೈತರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನೂ ಪೂರೈಸಲಾಗುತ್ತದೆ. ನಾಲೆಗಳ ಕಡೇ ಭಾಗಕ್ಕೆ ನೀರು ತಲುಪವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಡ್ಯ ಮಾತ್ರವಲ್ಲದೆ ಮೈಸೂರು, ತಿ.ನರಸೀಪುರ, ವರುಣಾ ಭಾಗದ ನಾಲೆಗಳಿಗೂ ನೀರು ಕೊಡಲಾಗುತ್ತದೆ. ನಾಲೆಗಳ ಸಂಪರ್ಕ ಇರುವ ಎಲ್ಲ ಕೆರೆ– ಕಟ್ಟೆಗಳನ್ನು ತುಂಬಿಸಲಾಗುತ್ತಿದೆ’ ಎಂದು ಹೇಳಿದರು.

‘ಕೆರೆಗಳಿಂದ ಹೂಳು ತೆಗೆಯುವ ಕೆಲಸ ಹಾಗೂ ಕೆರೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅನುದಾನ ಪಡೆದು ಕೆರೆಗಳ ನಿರ್ವಹಣೆಯ ಕಾಮಗಾರಿಗಳನ್ನು ನಡೆಸಿ’ ಎಂದರು.

ADVERTISEMENT

‘ಎಂಜಿನಿಯರ್‌ಗಳು ಕಚೇರಿಯಲ್ಲೇ ಕೂರದೆ ಕಾಲುವೆಗಳ ಏರಿ ಮೇಲೆ ತಿರುಗಾಡಬೇಕು. ಗಿಡಗಂಟಿ ಸ್ವಚ್ಛಗೊಳಿಸಬೇಕು. ಸಕಾಲಕ್ಕೆ ನಾಲೆಗಳ ಹೂಳು ತೆಗೆಸಬೇಕು. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಸೂಚಿಸಿದರು.

ವಿಸರ್ಜನೆ ಮಾಡಿದ್ದಾರಾ?:

‘ಬಹುಮತ ಬರದಿದ್ದರೆ ಜೆಡಿಎಸ್‌ ವಿಸರ್ಜಿಸುವುದಾಗಿ ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದಾರೆ. ಮೂರು ಚುನಾವಣೆಗಳು ಆಗಿ ಹೋಗಿವೆ. ಪಕ್ಷವನ್ನು ಅವರು ವಿಸರ್ಜನೆ ಮಾಡಿದ್ದಾರಾ’ ಎಂದು ಪ್ರಶ್ನಿಸಿದರು.

‘ತಾಲ್ಲೂಕಿನ ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆ ಜಾಗವನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ‘ತಪ್ಪನ್ನು ಸರಿಪಡಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಶಾಸಕರಾದ ರವಿಕುಮಾರ್‌, ಕೆ.ಎಂ. ಉದಯ್‌, ವಿಧಾನ ಪರಿಷತ್‌ ಸದಸ್ಯ ಮಧು ಮಾದೇಗೌಡ, ಜಿಲ್ಲಾಧಿಕಾರಿ ಕಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ರಘುರಾಂ, ಕಾರ್ಯಪಾಲಕ ಎಂಜಿನಿಯರ್‌ ವಿ. ಜಯಂತ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾವೇರಿ ಆರತಿ ಕಾರ್ಯಕ್ರಮದ ವಿಚಾರಣೆ ಜುಲೈ 23ಕ್ಕೆ ಇದೆ. ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗುವುದು
– ಎನ್‌.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

‘ತೂಕ ಇಳಿಸಲು ಮೈಸೂರಿಗೆ ಪಾದಯಾತ್ರೆ’:

ಮೈಸೂರು ಮೂಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನ್ಯಾಯಾಲಯ ಛೀಮಾರಿ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ ‘ಇದಕ್ಕಿಂತ ನಾವು ಇನ್ನೇನು ನಿರೀಕ್ಷೆ ಮಾಡಲಿಕ್ಕಾಗುತ್ತದೆ. ಆ ಪ್ರಕರಣದಲ್ಲಿ ಹುರುಳಿಲ್ಲ ಅಂತ ಗೊತ್ತಾಗಿದೆ. ಕುಮಾರಸ್ವಾಮಿ ವಿಜಯೇಂದ್ರಂಗೆ ಬೆಳಿಗ್ಗೆ ಹೊತ್ತು ವಾಕಿಂಗ್‌ ಮಾಡಕ್ಕಾಗ್ತಿರಲಿಲ್ಲವಂತೆ. ಅದಕ್ಕಾಗಿ ಮೈಸೂರಿನವರೆಗೆ ವಾಕ್ ಮಾಡಿದ್ರು. ತೂಕ ಕಡಿಮೆ ಆಗುತ್ತೆ ಅಂತ ವಿಜಯೇಂದ್ರ ಬೆಂಗಳೂರು ಟು ಮೈಸೂರು ವಾಕ್ ಮಾಡಿದ್ರು ಅಷ್ಟೇ’ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. 

‘ಅನುದಾನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ’:

‘ಅನುದಾನ ಕೊಡುವ ವಿಷಯದಲ್ಲಿ ನಮ್ಮ ಸರ್ಕಾರ ಯಾವ ಪಕ್ಷದ ಶಾಸಕರಿಗೂ ಅನ್ಯಾಯ ಮಾಡಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕಾಂಗ್ರೆಸ್‌ ಶಾಸಕರಿಗೆ ದ್ರೋಹ ಮಾಡಿತ್ತು. ನಮ್ಮ ಸರ್ಕಾರ ಆ ಮಟ್ಟಕ್ಕೆ ಇಳಿಯುವುದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿ ದೆಹಲಿ ಮತ್ತು ಬಿಹಾರ ರಾಜ್ಯಗಳಲ್ಲಿ ಈ ಯೋಜನೆಗಳನ್ನು ನಕಲು ಮಾಡಿವೆ’ ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ‘ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಡುವೆ ಸಾಮರಸ್ಯ ಇಲ್ಲ. ಸರ್ಕಾರ ಬಿದ್ದು ಹೋಗುತ್ತದೆ ಎಂದು ವಿರೋಧಿಗಳು ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಅಸಹನೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.