ADVERTISEMENT

ಪಾಂಡವಪುರ | ಕಬ್ಬಿನ ಲಾರಿ ತಡೆದು ಪ್ರತಿಭಟನೆ

ಪಿಎಸ್‌ಎಸ್‌ಕೆ ಭಾಗದ ಕಬ್ಬು ಹೊರ ಜಿಲ್ಲೆಗೆ ಸಾಗಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 13:12 IST
Last Updated 27 ಜುಲೈ 2020, 13:12 IST
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಬಳಿ ಹೊರ ಜಿಲ್ಲೆ, ರಾಜ್ಯಗಳಿಗೆ ಸಾಗಿಸುತ್ತಿದ್ದ ಕಬ್ಬಿನ ಲಾರಿಯನ್ನು ತಡೆದು ರೈತರು, ಕಾರ್ಮಿಕರು ಪ್ರತಿಭಟನೆ ನಡೆಸಿದರು
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಬಳಿ ಹೊರ ಜಿಲ್ಲೆ, ರಾಜ್ಯಗಳಿಗೆ ಸಾಗಿಸುತ್ತಿದ್ದ ಕಬ್ಬಿನ ಲಾರಿಯನ್ನು ತಡೆದು ರೈತರು, ಕಾರ್ಮಿಕರು ಪ್ರತಿಭಟನೆ ನಡೆಸಿದರು   

ಪಾಂಡವಪುರ: ಇಲ್ಲಿನ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ವ್ಯಾಪ್ತಿಯ ಕಬ್ಬನ್ನು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕಬ್ಬಿನ ಲಾರಿಯನ್ನು ತಡೆದು ರೈತರು ಹಾಗೂ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಪಿಎಸ್‌ಎಸ್‌ಕೆ ಬಳಿಯ ಮೈಸೂರು ಮುಖ್ಯ ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿಯನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರವು ಪಿಎಸ್‌ಎಸ್‌ಕೆಯನ್ನು ನಿರಾಣಿ ಶುಗರ್ಸ್‌ಗೆ ಗುತ್ತಿಗೆ ನೀಡಿದ್ದು, ಆ. 11ರಿಂದ ಕಾ‌ರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಗೊಳ್ಳಲಿದೆ. ಇದಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಈ ಭಾಗದ ಕಬ್ಬನ್ನು ಹೊರ ಜಿಲ್ಲೆ ಮತ್ತು ರಾಜ್ಯದ ಸಕ್ಕರೆ ಕಾರ್ಖಾನೆಯ ಮಾಲೀಕರು ಖರೀದಿಸಲು ಮುಂದಾಗಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಹೊರಗಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡದಂತೆ ಹಾಗೂ ಸಾಗಣೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತವು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

‘ಕಬ್ಬು ಸಾಗಣೆಯನ್ನು ನಿಲ್ಲಿಸಲು ಕ್ರಮ ವಹಿಸದಿದ್ದರೆ ಈ ಭಾಗದಿಂದ ಹೊರ ಹೋಗುವ ಕಬ್ಬು ತುಂಬಿದ ಲಾರಿಗಳನ್ನು ತಡೆದು ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎಂ.ಬೆಟ್ಟಹಳ್ಳಿ ಮಂಜುನಾಥ್, ಕೆನ್ನಾಳು ವೇಣುಗೋಪಾಲ್‌, ಹಾರೋಹಳ್ಳಿ ದಳವಾಯಿಗೌಡ, ಯೋಗೀಶ್, ಕಾಂತರಾಜು, ಜಗದೀಶ್, ದೇವು, ಕಾರ್ಮಿಕ ಮುಖಂಡರಾದ ರಾಜಶೇಖರ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.