ADVERTISEMENT

ಹೊರಗುತ್ತಿಗೆ ಉದ್ಯೋಗಿ ಆತ್ಮಹತ್ಯೆಗೆ ಯತ್ನ

10 ತಿಂಗಳಿಂದ ವೇತನ ನೀಡದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:32 IST
Last Updated 23 ಆಗಸ್ಟ್ 2019, 20:32 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀತಾ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀತಾ   

ಮಂಡ್ಯ: 10 ತಿಂಗಳಿಂದ ವೇತನ ನೀಡದ ಕಾರಣ ಮನನೊಂದು ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಾದ, ಹಾಲಹಳ್ಳಿ ಬಡಾವಣೆ ನಿವಾಸಿ ಸುನೀತಾ (30) ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸೇರಿದಂತೆ 266 ನೌಕರರಿಗೆ ಕಳೆದ 10 ತಿಂಗಳಿಂದ ವೇತನ ಪಾವತಿಸಿಲ್ಲ. ಕೆಲವರಿಗೆ ನಾಲ್ಕು ತಿಂಗಳ ಸಂಬಳವನ್ನು ನೀಡಲಾಗಿದೆ. ಹೆಚ್ಚು ಮಂದಿ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿವಮೊಗ್ಗ ಮೂಲದ ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದುಕೊಂಡಿದ್ದು, ಅವರೀಗ ನಾಪತ್ತೆಯಾಗಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ ಅವರ ಬಳಿ ಗುರುವಾರ ತೆರಳಿದ್ದ ಸುನೀತಾ, ವೇತನ ಪಾವತಿಯಾಗದಿರುವ ಬಗ್ಗೆ ಪ್ರಸ್ತಾಪಿಸಿದ್ದರು.

ADVERTISEMENT

‘ಅದಕ್ಕೂ ನಮಗೂ ಸಂಬಂಧವಿಲ್ಲ. ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ’ ಎಂದು ಮಂಚೇಗೌಡ ಅವರು ಹೇಳಿಕಳುಹಿಸಿದ್ದಾರೆ.

ಇದರಿಂದ ಮನನೊಂದ ಸುನೀತಾ ಮನೆಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದವರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಆ.19ರಂದು ನಡೆದಿದ್ದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ವೇತನ ಪಾವತಿಯಾಗದಿರುವ ಬಗ್ಗೆ ಸದಸ್ಯರು ಡಿಎಚ್‌ಒ ಡಾ.ಎಚ್.ಪಿ. ಮಂಚೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ವೇತನ ಪಾವತಿಗೆ ಕ್ರಮ ವಹಿಸುವಂತೆ ಆಗ್ರಹಿಸಿದ್ದರು. ಆದರೂ ವೇತನ ಪಾವತಿ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.