ADVERTISEMENT

ಕರ್ಫ್ಯೂ: ಎಂದಿನಂತೆ ಓಡಾಡಿದ ವಾಹನಗಳು, ಅಂಗಡಿ ಮುಂಗಟ್ಟುಗಳು ಬಂದ್‌

ಅಂಗಡಿ ಮುಂಗಟ್ಟುಗಳು ಬಂದ್‌, ಮಟನ್‌, ಚಿಕನ್‌ ಅಂಗಡಿಗಳಲ್ಲಿ ಭರ್ಜರಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 13:57 IST
Last Updated 19 ಜುಲೈ 2020, 13:57 IST
ಮಂಡ್ಯದ ವಿವಿ ರಸ್ತೆಯಲ್ಲಿ ಎಂದಿನಂತೆ ಓಡಾಡಿದ ವಾಹನಗಳು
ಮಂಡ್ಯದ ವಿವಿ ರಸ್ತೆಯಲ್ಲಿ ಎಂದಿನಂತೆ ಓಡಾಡಿದ ವಾಹನಗಳು   

ಮಂಡ್ಯ: ಭಾನುವಾರ ಕರ್ಫ್ಯೂ ಜಾರಿಯಲ್ಲಿದ್ದರೂ ಜನರು ಎಂದಿನಂತೆ ರಸ್ತೆಗಿಳಿದಿದ್ದರು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ವಾಹನಗಳ ಓಡಾಟ ಎಂದಿನಿಂತಿತ್ತು. ಮಾಂಸದಂಗಡಿ, ಅಗತ್ಯವಸ್ತುಗಳ ಅಂಗಡಿ ಹೊರತುಪಡಿಸಿ ಇತರ ಅಂಗಡಿ–ಮುಂಗಟ್ಟು ಬಂದ್‌ ಆಗಿದ್ದವು.

ಕಳೆದೆರಡು ಭಾನುವಾರದ ಲಾಕ್‌ಡೌನ್‌ಗೆ ಜನರು ಸಹಕಾರ ನೀಡಿದ್ದರು. ಆದರೆ ಈ ಭಾನುವಾರ ಜನರ ಸಹಕಾರ ಅಷ್ಟಾಗಿ ಕಂಡುಬರಲಿಲ್ಲ. ಕೊರೊನಾ ಸೋಂಕಿನ ಭೀತಿಯ ನಡುವೆಯೂ ಜನರು ವೈಯಕ್ತಿಕ ವಾಹನಗಳಲ್ಲಿ ಓಡಾಡಿದರು. ನಿತ್ಯದ ಕೆಲಸಗಳನ್ನು ಬಿಡಲಾಗುತ್ತದೆಯೇ ಎಂಬ ವರ್ತನೆ ಕಂಡುಬಂತು. ಕೆಲವೆಡೆ ಅಂಗಡಿ ಬಾಗಿಲನ್ನು ಸಲ್ಪ ತೆರೆದು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಜಿಲ್ಲೆಯ ಹಲವೆಡೆ ಅರ್ಧ ದಿನದ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಾಮಾನ್ಯ ದಿನಕ್ಕೂ ಭಾನುವಾರಕ್ಕೂ ಅಷ್ಟಾಗಿ ವ್ಯತ್ಯಾಸ ಕಂಡು ಬರಲಿಲ್ಲ. ತರಕಾರಿ, ಮಾಂಸ ಖರೀದಿಯ ಕಾರಣಗಳನ್ನು ಮುಂದಿಟ್ಟು ಸಾರ್ವಜನಿಕರು ರಸ್ತೆಗಳಿಯುತ್ತಿದ್ದರು. ಹೊಸಹಳ್ಳಿ ಮುಖ್ಯರಸ್ತೆಯಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಜನರು ಯಾವುದೇ ಅಂತರ ಕಾಪಾಡಿಕೊಳ್ಳಲಿಲ್ಲ. ಕೆಲವು ಚಿಕನ್‌, ಮಟನ್‌ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಂಡಿದ್ದರು.

ADVERTISEMENT

ಜಿಲ್ಲೆಯ ಹಲವು ಪೊಲೀಸ್‌ ಠಾಣೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಪ್ರವೇಶ ನಿಯಂತ್ರಿಸುತ್ತಿದ್ದರು. ಕಂಟೈನ್‌ಮೆಂಟ್‌ ಬಡಾವಣೆಗಳಲ್ಲಿ ಜನರ ಓಡಾಟ ಸ್ಥಗಿತಗೊಂಡಿತ್ತು. ಸೋಂಕಿನ ಭಯದಿಂದಾಗಿ ಜನರು ಆ ಕಡೆ ಹೋಗುವುದನ್ನು ನಿಲ್ಲಿಸಿದ್ದರು. ಅಲ್ಲಿ ಪೊಲೀಸರು ಕೂಡ ಇರಲಿಲ್ಲ. ಲಾಕ್‍ಡೌನ್ ಕಾರಣದಿಂದ ಕೆಲವರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇದ್ದರು. ವಾರಾಂತ್ಯದಲ್ಲಿ ಸದಾ ವಾಹನಗಳಿಂದ ತುಂಬಿರುತ್ತಿದ್ದ ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ವಾಹನಗಳಿಲ್ಲದೆ ಬಿಕೋ ಎನ್ನುತ್ತಿತ್ತು.

ಕೆಲವೆಡೆ ಬೆಳಿಗ್ಗೆ 10 ಗಂಟೆವರೆಗೆ ದಿನಸಿ ಅಂಗಡಿಗಳು ತೆರೆದಿದ್ದವು. ಲಾಕ್‍ಡೌನ್ ಇರುತ್ತದೆ ಎಂದು ತಿಳಿದ ಹಲವರು ಶನಿವಾರವೇ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ದರು. ನಗರದ ಪೇಟೆ ಬೀದಿ, ಮಹಾವೀರ ವೃತ್ತ, ವಿವಿ ರಸ್ತೆ, ಆರ್‍ಪಿ ರಸ್ತೆ, ವಿನೋಬಾ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು ಮುಚ್ಚಿದ್ದವು. ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿ ಹೂವು ಹಣ್ಣು ವ್ಯಾಪಾರಿಗಳು ಅಂಗಡಿ ತೆರೆದಿದ್ದರೂ, ದೇವಸ್ಥಾನಗಳು, ಸಭೆ ಸಮಾರಂಭಗಳು ನಡೆಯದ ಕಾರಣ ಗ್ರಾಹಕರಿಲ್ಲದೆ ಪರದಾಡಿದರು.

ಲಾಕ್‍ಡೌನ್ ಕಾರಣದಿಂದ ಭಾನುವಾರ ಜಿಲ್ಲೆಯಲ್ಲಿ ಖಾಸಗಿ ಬಸ್, ಕೆಎಸ್‍ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸಾರಿಗೆ ಬಸ್‍ಗಳು ಘಟಕಗಳಲ್ಲೇ ನಿಂತಿದ್ದವು. ಆಟೊಗಳು ರಸ್ತೆಗೆ ಇಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.