ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಮಂಗಳವಾರ ಮುಂಜಾನೆ ಮುತ್ತುಮಾರಮ್ಮ ದೇವಿಯ 53ನೇ ವರ್ಷದ ಕರಗ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಪಟ್ಟಣದ ಕಾವೇರಿ ನದಿ ಸೋಪಾನಕಟ್ಟೆಯಿಂದ ಮಹೋತ್ಸವ ಆರಂಭವಾಗಿ ಮಂಗಳ ವಾದ್ಯ ಮತ್ತು ಜಾನಪದ ಕಲಾ ತಂಡಗಳ ಸಹಿತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗ ಸಾಗಿತು. ಮುಖ್ಯ ಬೀದಿ, ರಾಂಪಾಲ್ ರಸ್ತೆ, ಗೋಸೇಗೌಡ ಬೀದಿ, ಅಂಚೆ ಕಚೇರಿ ರಸ್ತೆ, ರಂಗನಾಥನಗರ, ಬೂದಿಗುಂಡಿ ಸೇರಿದಂತೆ ವಿವಿಧೆಡೆ ಕರಗ ಮಹೋತ್ಸವ ನಡೆಯಿತು.
ಮುತ್ತುಮಾರಮ್ಮ ದೇವಾಲಯದ ಗುಡ್ಡಪ್ಪ ಬಿ. ಕುಮಾರ್ ಸರ್ವಾಲಂಕೃತ ಕರಗವನ್ನು ಹೊತ್ತು ಸಾಗಿದರು. ಕರಗ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಈಡುಗಾಯಿ ಮತ್ತು ಕರ್ಪೂರದ ಸೇವೆ ಸಲ್ಲಿಸಿದರು.
ಮುಂಜಾನೆ 5.30ರ ವೇಳೆಗೆ ಮುತ್ತು ಮಾರಮ್ಮ ದೇವಾಲಯದ ಆವರಣಕ್ಕೆ ಆಗಮಿಸಿದ ಕರಗಕ್ಕೆ ಭಕ್ತರು ಸರದಿಯಂತೆ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಮುಂದೆ ಸಿದ್ದಪಡಿಸಿದ್ದ ಕೊಂಡವನ್ನು ಗುಡ್ಡಪ್ಪ ಬಿ. ಕುಮಾರ್ ಹಾಯ್ದರು. ಕೊಂಡ ಹಾಯುವ ವೇಳೆ ಮುತ್ತುಮಾರಮ್ಮ ದೇವಿಯ ಪರ ಘೋಷಣೆಗಳು ಮೊಳಗಿದವು.
ಇದಕ್ಕೂ ಮುನ್ನ ಮುತ್ತುಮಾರಮ್ಮ ಮತ್ತು ಮುನೇಶ್ವರ ದೇವರಿಗೆ ವಿಶೇಷ ಪೂಜೆಗಳು ನಡೆದವು. ಬಗೆ ಬಗೆಯ ಫಲ, ಪುಷ್ಪಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಕ್ಷೀರಾಭಿಷೇಕ, ಎಳನೀರು ಅಭಿಷೇಕ ಇತರ ಕೈಂಕರ್ಯಗಳು ಜರುಗಿದವು. ಪಟ್ಟಣ ಮಾತ್ರವಲ್ಲದೆ ಜಿಲ್ಲೆ, ಹೊರ ಜಿಲ್ಲೆಗಳ ನೂರಾರು ಭಕ್ತರು ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.