ಕಿಕ್ಕೇರಿ: ದೈವದತ್ತವಾಗಿ ಕಲಾವಿದತ್ವ ಕತೃ ಶಕ್ತಿ ಸಿಂಧೋಳ್ ಬುಡಕಟ್ಟು ಸಮುದಾಯದಲ್ಲಿದ್ದು, ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿನ ಸಿಂಧೋಳ್ ಬುಡಕಟ್ಟು ನೆಲೆಸಿರುವ ಕೇರಿ(ಬಡಾವಣೆ)ಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಸಿಂಧೋಳ್ ಬುಡಕಟ್ಟು ನೆಲೆಸಿರುವ ಗ್ರಾಮ ಇದಾಗಿದ್ದು, ಅನಕ್ಷರತೆ, ಬಡತನದಿಂದ ಊರುಮಾರಮ್ಮ ಹೊತ್ತು ಚಾವಟಿಯಲ್ಲಿ ದಂಡನೆ ಮಾಡಿಕೊಂಡು ಸಿಕ್ಕ ಕಾಸಿನಲ್ಲಿ ಬದುಕುವುದನ್ನು ಬಿಡಿ. ತಮಗಾಗಿ ನಿಗಮವಿದೆ. ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷೆ ಪಲ್ಲವಿ ಗ್ರಾಮಕ್ಕೆ ಬಂದು ತಮ್ಮ ಅವಶ್ಯಕತೆಗಳನ್ನು ತ್ವರಿತವಾಗಿ ಪೂರೈಸುವ ಭರವಸೆ ನೀಡಿದ್ದಾರೆ. ಜಾತಿಗಣತಿ ಸರ್ವೆ ನಡೆಯುತ್ತಿದ್ದು, ತಮ್ಮ ಜಾತಿಯನ್ನು ಸ್ಪಷ್ಟವಾಗಿ ಸಿಂಧೋಳ್ ಎಂದು ಬರೆಯಿಸಿ. ಮಕ್ಕಳ ಶಿಕ್ಷಣ, ಉದ್ಯೋಗ, ಕುಟುಂಬಕ್ಕೆ ಸಿಗುವ ಸೌಲಭ್ಯಕ್ಕೆ ಅನುಕೂಲವಾಗಲಿದೆ’ ಎಂದರು.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ. ತಮಲ್ಲಿ ಡ್ರಾಮಾ ಮಾಸ್ಟರ್, ನಾಟಕ ಕಲಾವಿದರು, ವಾದ್ಯ ನುಡಿಸುವ ಕಲಾವಿದರಿದ್ದು ಹಿರಿಯರು ಕಲಾವಿದರ ಮಾಶಾಸನವನ್ನು ಮಾಡಿಸಿಕೊಳ್ಳಿ. ಮಾಶಾಸನ ಪಡೆಯಲು ಅರ್ಹ ದಾಖಲಾತಿಗಳು ಮಾನದಂಡವಾಗಿದ್ದು, ಮಧ್ಯವರ್ತಿಗಳ ಅವಲಂಬಿಸದಿರಿ’ ಎಂದು ಕಿವಿ ಮಾತನಾಡಿದರು.
ಮುಖಂಡ ಮಾರಪ್ಪ ಮಾತನಾಡಿ, ‘ಓದು ಬರಹದ ಬುಡಕಟ್ಟು ತಮ್ಮದಾಗಿದೆ. ಅನಕ್ಷರತೆ, ಬಡತನವಿದೆ. ಮಕ್ಕಳಿಗೆ ಸಂಗೀತ ಕಲಿಯಲು ಆಸಕ್ತಿ ಇದೆ. ಸಂಗೀತ ಶಿಬಿರ ನಡೆಸಿಕೊಡಿ’ ಎಂದು ಒತ್ತಾಯಿಸಿದರು.
ಮುಖಂಡರಾದ ಮಾರಪ್ಪ, ಅಂಜನಪ್ಪ, ರಾಜಣ್ಣ, ನರಸಿಂಹ, ಸಿದ್ದಲಿಂಗಯ್ಯ, ರಾಮಯ್ಯ, ರಂಗಯ್ಯ, ಗಂಗಮ್ಮ, ಶಂಕರ್, ಶಾಂತಕುಮಾರ್, ಲಕ್ಷ್ಮಯ್ಯ, ಶಿವಣ್ಣ, ರಾಜೇಶ್, ಡ್ರೈವರ್ ಮಹೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.