ADVERTISEMENT

ಸುಲಿಗೆ: ವರ್ಷದ ಬಳಿಕ ಆರೋಪಿಗಳ ಸೆರೆ

ಡ್ರಾಪ್‌ ಕೊಡುವ ನೆಪದಲ್ಲಿ ಮಹಿಳೆ ಬಳಿ ಇದ್ದ ಹಣ, ಮೊಬೈಲ್ ಕಳವು ಮಾಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 3:00 IST
Last Updated 20 ನವೆಂಬರ್ 2020, 3:00 IST
ಆರೋಪಿಗಳಾದ ಅರುಣ್ ಮತ್ತು ಮನ್ಸೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ
ಆರೋಪಿಗಳಾದ ಅರುಣ್ ಮತ್ತು ಮನ್ಸೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ   

ಮಳವಳ್ಳಿ: ಡ್ರಾಪ್‌ ಕೊಡುವ ನೆಪದಲ್ಲಿ ಮಹಿಳೆಯಿಂದ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಅರುಣ್ ಮತ್ತು ಮನ್ಸೂರ್ ಬಂಧಿತ ಆರೋಪಿಗಳು. ಒಂದು ವರ್ಷದ ಹಿಂದೆ ರಾತ್ರಿ ವೇಳೆ ಪಟ್ಟಣದಲ್ಲಿ ತಾಲ್ಲೂಕಿನ ಕಿರುಗಾವಲಿನ ಬಸ್‌ಗಾಗಿ ಕಾಯುತ್ತಾ ನಿಂತಿದ್ದ ನಸೀನ್ ತಾಜ್ ಅವರಿಗೆ ಡ್ರಾಪ್‌ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಕರೆದೊಯ್ದು ತಾಲ್ಲೂಕಿನ ಮಾರ್ಕಾಲು ಗೇಟ್ ಬಳಿ ನಿಲ್ಲಿಸಿ ಫರ್ಸ್ ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.

ಗ್ರಾಮಾಂತರ ಸಿಪಿಐ ಧನರಾಜ್ ನೇತೃತ್ವದಲ್ಲಿ ಪಿಎಸ್ಐಗಳಾದ ಹನುಮಂತ ಕುಮಾರ್, ಮಲ್ಲಪ್ಪ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕನಕಪುರ ತಾಲ್ಲೂಕಿನ ಸಾತನೂರು ಗ್ರಾಮದ ಬಳಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಮಹಿಳೆಗೆ ಸುಟ್ಟ ಗಾಯ

ಕೊಪ್ಪ: ಇಲ್ಲಿಗೆ ಸಮೀಪದ ಸೋಮನಹಳ್ಳಿಯಲ್ಲಿ ಕಬ್ಬಿನ ತರಗಿಗೆ ಬೆಂಕಿ ಹಚ್ಚಲು ಹೋದ ಸಂದರ್ಭದಲ್ಲಿ ಬೆಂಕಿ ತಗುಲಿ ಗೃಹಿಣಿಯೊಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಗ್ರಾಮದ ಸತೀಶ ಅವರ ಪತ್ನಿ ಪಾರ್ವತಿ (30) ಅವರಿಗೆ ಸುಟ್ಟ ಗಾಯಗಳಾಗಿವೆ. ಕಾರ್ಖಾನೆಗೆ ಕಬ್ಬು ಸಾಗಿಸಿದ ನಂತರ ತರಗಿಗೆ ಬೆಂಕಿ ಹಚ್ಚಿ, ಹಿಂದಿರುಗುವ ಸಂದರ್ಭದಲ್ಲಿ ಬಟ್ಟೆಗೆ ಬೆಂಕಿ ತಗುಲಿ ಘಟನೆ
ನಡೆದಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಬೆಳಕವಾಡಿ: ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಭಕ್ತವತ್ಸಲ ಅವರ ಪತ್ನಿ ವೀಣಾ (30) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.

ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ವೀಣಾ ಪೋಷಕರು ಆರೋಪಿಸಿದ್ದಾರೆ.

ಸಾಗರ ತಾಲ್ಲೂಕಿನ ವೀಣಾ ಹಾಗೂ ಗ್ರಾಮದ ಭಕ್ತವತ್ಸಲ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸಿ 2016ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಇದೆ. ಮದುವೆ ಸಂದರ್ಭದಲ್ಲಿ ₹5 ಲಕ್ಷ ವರದಕ್ಷಿಣೆ ನೀಡಲಾಗಿತ್ತು ಎನ್ನಲಾಗಿದೆ.

ಭಕ್ತವತ್ಸಲ ಮತ್ತು ಕುಟುಂಬದವರು ಹೆಚ್ಚಿನ ವರದಕ್ಷಿಣೆ ತರುವಂತೆ ವೀಣಾ ಅವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಪತಿ ಸೇರಿದಂತೆ ಏಳು ಮಂದಿಯ ವಿರುದ್ದ ಮಹಿಳೆಯ ಸಹೋದರ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಳಕವಾಡಿ ಪೊಲೀಸರು ಭಕ್ತವತ್ಸಲ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆಯತಪ್ಪಿ ಬಿದ್ದು ಮಗು ಸಾವು

ಮಂಡ್ಯ: ತಾಲ್ಲೂಕಿನ ಕಿರಗಂದೂರು ಗ್ರಾಮದಲ್ಲಿ ಗುರುವಾರ ರಸ್ತೆ ಉಬ್ಬಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿದೆ.

ತಾಲ್ಲೂಕಿನ ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿಯ ಪುತ್ರಿ ಕನಿಷ್ಕಾ ಮೃತ ಮಗು. ಬೇವಿನಹಳ್ಳಿಯಲ್ಲಿ ಮದುವೆ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕಿರಗಂದೂರು ಗ್ರಾಮದ ಬಳಿ ಘಟನೆ ನಡೆದಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆತಂದರೂ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಬೈಕ್ ಸವಾರ ಸಾವು

ಕೊಪ್ಪ: ಸಮೀಪದ ಹೊಸಗಾವಿ ಗ್ರಾಮದ ಬಳಿ ಬುಧವಾರ ರಾತ್ರಿ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲೆಯ ಕೈಲಂಚ ಹೋಬಳಿಯ ಅಂಜನಾಪುರ ಗ್ರಾಮದ ಅಂಜನಪ್ಪ (51) ಮೃತರು.

ಪತ್ನಿಯೊಂದಿಗೆ ಬಸರಾಳು ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.