ADVERTISEMENT

ಮಂಡ್ಯ | ಮೂವರ ಸಾವು: 95 ಮಂದಿಗೆ ಕೋವಿಡ್‌ ದೃಢ

ಸೋಂಕಿತರ ಸಂಖ್ಯೆ 1660ಕ್ಕೆ ಏರಿಕೆ, 666 ಪ್ರಕರಣಗಳು ಸಕ್ರಿಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:56 IST
Last Updated 1 ಆಗಸ್ಟ್ 2020, 16:56 IST
ಕೋವಿಡ್‌–19ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು
ಕೋವಿಡ್‌–19ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು   

ಮಂಡ್ಯ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು 24 ಗಂಟೆಯ ಅಂತರದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌–19ಗೆ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ತಾಲ್ಲೂಕಿನ ಗೌಡಗೆರೆ ಗ್ರಾಮದ 72 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಅವರು ಜುಲೈ 28ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ. ನಾಗಮಂಗಲ ಪಟ್ಟಣದ 56 ವರ್ಷದ ವ್ಯಕ್ತಿ ಕೂಡ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಇವರು ಜುಲೈ 30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತು.

ಕೆ.ಆರ್‌.ಪೇಟೆಯ 66 ವರ್ಷದ ವ್ಯಕ್ತಿ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಇವರನ್ನು ಜುಲೈ 30ರಂದು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನೂ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಮೂವರನ್ನೂ ಕೋವಿಡ್‌ ಕಾರ್ಯಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ADVERTISEMENT

‘ಬಹುತೇಕ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಕೋವಿಡ್‌ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಕೋವಿಡ್ ಲಕ್ಷಣಗಳು ಕಂಡಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಸಾವನ್ನು ತಡೆಯಬಹುದು. ಶೀತ, ಜ್ವರ ಇದ್ದಾಗ ಆಸ್ಪತ್ರೆಗೆ ಬಾರದೇ ಉಸಿರಾಟದ ಸಮಸ್ಯೆ ಆದಾಗ ಬಂದರೆ ರೋಗಿಗಳನ್ನು ಉಳಿಸುವುದು ಕಷ್ಟವಾಗುತ್ತದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

95 ಮಂದಿಗೆ ಸೋಂಕು: ಶನಿವಾರ ಒಂದೇ ದಿನ 95 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1660ಕ್ಕೆ ಏರಿಕೆಯಾಗಿದೆ.

ಮಂಡ್ಯ ತಾಲ್ಲೂಕಿನಲ್ಲಿ 28, ಶ್ರೀರಂಗಪಟ್ಟಣ 14, ಪಾಂಡವಪುರ 14, ಮಳವಳ್ಳಿ 13, ನಾಗಮಂಗಲ 12, ಮದ್ದೂರು 7, ಕೆ.ಆರ್‌.ಪೇಟೆ ತಾಲ್ಲೂಕಿನ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 1660 ಮಂದಿಯಲ್ಲಿ 983 ಮಂದಿ ಗುಣಮುಖರಾಗಿದ್ದಾರೆ. 666 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್‌ನಿಂದ ಗುಣಮುಖರಾದ 27 ಮಂದಿಯನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 11, ಶ್ರೀರಂಗಪಟ್ಟಣ 10, ನಾಗಮಂಗಲ 3, ಮದ್ದೂರು 2, ಪಾಂಡವಪುರ ತಾಲ್ಲೂಕಿನ ಒಬ್ಬರನ್ನು ಮನೆಗೆ ಕಳುಹಿಸಲಾಯಿತು.

ಸಂಸ್ಕಾರ ಸ್ಥಳದಲ್ಲೇ ಬಕ್ರೀದ್‌ ಪ್ರಾರ್ಥನೆ!

ನಗರಸಭಾ ಸದಸ್ಯ ಝಾಕಿರ್‌ ಪಾಷಾ ನೇತೃತ್ವದಲ್ಲಿ 10 ಮುಸ್ಲಿಂ ಯುವಕರ ತಂಡ ಕೋವಿಡ್‌ ಮೃತದೇಹಗಳ ಶವಸಂಸ್ಕಾರ ಮಾಡುತ್ತಿದೆ. ಶನಿವಾರ ಈ ತಂಡ ಮೂರು ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದೆ. ಬಕ್ರೀದ್‌ ಹಬ್ಬ ಆಚರಣೆಗೂ ಸಮಯ ಸಿಗದ ಕಾರಣ ಇವರು ಶವಸಂಸ್ಕಾರ ಸ್ಥಳದಲ್ಲೇ ಪ್ರಾರ್ಥನೆ ಸಲ್ಲಿಸಿದ್ದಾರೆ.

‘ನಾವು ಮಾನವ ಸೇವೆ ಮಾಡುತ್ತಿದ್ದೇವೆ. ಸೇವೆ ಮಾಡುತ್ತಲೇ ಹಬ್ಬದ ಪ್ರಾರ್ಥನೆ ಸಲ್ಲಿಸಿದ್ದೇವೆ.ಜಿಲ್ಲೆಯಲ್ಲಿ ಸಾವುಗಳು ಹೆಚ್ಚಾಗಿ ಆಗದಿರಲಿ ಎಂದು ಅಲ್ಲಾಹುವಿನಲ್ಲಿ ಕೇಳಿಕೊಂಡಿದ್ದೇವೆ’ ಎಂದು ಝಾಕಿರ್‌ ಪಾಷಾ ಹೇಳಿದರು.

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು: 1,660

ಸಕ್ರಿಯ ಪ್ರಕರಣ: 666

ಏರಿಕೆ: 95

ಗುಣಮುಖ: 983

ಏರಿಕೆ: 27

ಸಾವು: 20

ಏರಿಕೆ: 0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.