ADVERTISEMENT

ಕಂದಹಳ್ಳಿ: ವಿದ್ಯುತ್‌ ಪ್ರವಹಿಸಿ ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 8:41 IST
Last Updated 4 ಡಿಸೆಂಬರ್ 2019, 8:41 IST
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡ ಮಹಿಳೆಯರನ್ನು ಗ್ರಾಮಸ್ಥರು ರಕ್ಷಿಸಿದರು
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡ ಮಹಿಳೆಯರನ್ನು ಗ್ರಾಮಸ್ಥರು ರಕ್ಷಿಸಿದರು   

ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಮನೆ ಮುಂದಿನ ಕೊಟ್ಟಿಗೆ ಬಳಿ ವಿದ್ಯುತ್‌ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಮಹಿಳೆಯರು ಸೋಮವಾರ ತೀವ್ರವಾಗಿ ಗಾಯಗೊಂಡಿದ್ದಾರೆ.

ಕುಮಾರಿ (45), ನಾಗರತ್ನಾ (33), ಸುಮಾ (26) ಗಾಯಗೊಂಡವರು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮನೆಯ ಸಮೀಪ ನಿರ್ಮಾಣ ಹಂತದ ಚರಂಡಿ ಇದೆ. ಇಲ್ಲಿ ಸಂಗ್ರಹವಾಗುವ ನೀರು ಮನೆಯ ತನಕ ಹರಡುತ್ತದೆ. ಬೆಳಿಗ್ಗೆ ಮನೆ ಮುಂದಿನ ಕೊಟ್ಟಿಗೆಗೆ ಸಂಪರ್ಕಿಸುವ ವಿದ್ಯುತ್‌ ತಂತಿಯು ಬಟ್ಟೆ ಒಣಗಿಸಲು ಇಳಿಬಿಟ್ಟಿದ್ದ ತಂತಿಗೆ ತಗುಲಿ ಈ ಅವಘಡ ಸಂಭವಿಸಿದೆ.

ಒಬ್ಬರಿಗೊಬ್ಬರು ರಕ್ಷಿಸುವ ವೇಳೆ ಮನೆ ಮುಂದಿನ ಕೆಸರು ನೆಲದಲ್ಲಿ ಎಲ್ಲರೂ ಬಿದ್ದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಗಾಯಗೊಂಡವರನ್ನು ಗ್ರಾಮಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗಿದೆ.

ADVERTISEMENT

ಶಾಸಕ ಎನ್‌.ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.