ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಆರಾಧ್ಯ ದೈವ ವೀರಭದ್ರೇಶ್ವರಸ್ವಾಮಿ ಅಗ್ನಿಕುಂಡ ಮಹೋತ್ಸವ ಹಬ್ಬದ ಮೊದಲನೇ ದಿನವಾದ ಸೋಮವಾರದಂದು ನಾಲೆಯಿಂದ ಕಾವೇರಿ ಪವಿತ್ರ ಜಲವನ್ನು (ಹೊಸ ನೀರು) ತಂದ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ‘ಪೂರ್ಣಕುಂಭ’ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇವಾಲಯದ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು.
ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, ಭಕ್ತಿಭಾವದಿಂದಲೇ ಕೀಲಾರ ಮತ್ತು ಆಲಕೆರೆ ಗ್ರಾಮಸ್ಥರು ಭಾಗವಹಿಸಿ ಪುನೀತರಾದರು. ದೇವಾಲಯದಲ್ಲಿ ಬೆಳಿಗ್ಗಿನಿಂದಲೇ ಗಣಪತಿ ಹೋಮ ನಡೆಯಿತು. ವೀರಭದ್ರೇಶ್ವರಸ್ವಾಮಿ ಉತ್ಸವ, ನಂದಿ ಧ್ವಜ ಹೊತ್ತ ಭಕ್ತರು, ಹಾಗೂ ವೀರಗಾಸೆಯು ತಮಟೆ, ನಗಾರಿ, ಮಂಗಳ ವಾದ್ಯಗಳೊಂದಿಗೆ ದೇವಾಲಯದವರೆಗೂ ಮೆರವಣಿಗೆ ನಡೆಸಲಾಯಿತು.
ಛತ್ರಿ, ಚಾಮರಗಳು ಮೆರವಣಿಗೆಗೆ ಮೆರುಗು ನೀಡಿದರೆ, ಹೊಸ ನೀರು ತರುವ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಹೊಸ ಬಟ್ಟೆ ಹಾಗೂ ಆಭರಣಗಳನ್ನು ಹಾಕಿಕೊಂಡು ಮಿಂಚಿದರು. ನೆರದಿದ್ದ ಜನರಲ್ಲಿ ಮಂದಹಾಸ ಮನೆ ಮಾಡಿತ್ತು. ಸುಮಾರು ಐದರಿಂದ ಆರು ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗಂಗಾಪೂಜೆ ಗಣಪತಿ ಹೋಮ, ಮಹಾರುದ್ರ ಹೋಮ ಮತ್ತು ಸ್ವಾಮಿಯವರಿಗೆ ಮಹಾರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಬೂದನೂರಿನ ತಗಡೂರು ಅಂಕನಾಥೇಶ್ವರ ದೇವರನ್ನು ಬರಮಾಡಿಕೊಳ್ಳಲಾಗುವ ಕಾರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವ ಹಬ್ಬಕ್ಕೆ ವಿಜೃಂಭಣೆಯ ಚಾಲನೆ ದೊರಕಿತು.
ಮದ್ಯ ಮಾರಾಟ ನಿಷೇಧ:
ವೀರಭದ್ರೇಶ್ವರ ಕೊಂಡೋತ್ಸವ ಮತ್ತು ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ಕೆರೆಗೋಡು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಕೀಲಾರ ಗ್ರಾಮದ ಧನಲಕ್ಷ್ಮಿ ಬಾರ್ ಮತ್ತು ಎಂ.ಎಸ್.ಐ.ಎಲ್. ಬಾರ್‌ಗಳಲ್ಲಿ ಮೇ 6ರಂದು ಬೆಳಿಗ್ಗೆ 6ರಿಂದ ಮೇ 8ರ ರಾತ್ರಿ 8ರವರೆಗೆ ಮದ್ಯ ಮಾರಾಟ, ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಕುಮಾರ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.