ADVERTISEMENT

ಮಣ್ಣು ಪಾಲಾಗುತ್ತಿರುವ ತರಕಾರಿಗಳು

ಸಮಯಾವಕಾಶ ಹೆಚ್ಚಿಸಿ ರೈತರ ರಕ್ಷಿಸಿ: ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 4:21 IST
Last Updated 21 ಮೇ 2021, 4:21 IST
ನಾಗಮಂಗಲ ಪಟ್ಟಣದ ಎಪಿಎಂಸಿಯ ಮುಂಭಾಗದಲ್ಲೇ ರೈತರ ಬೆಳೆಗಳನ್ನು ಸುರಿದಿರುವುದು
ನಾಗಮಂಗಲ ಪಟ್ಟಣದ ಎಪಿಎಂಸಿಯ ಮುಂಭಾಗದಲ್ಲೇ ರೈತರ ಬೆಳೆಗಳನ್ನು ಸುರಿದಿರುವುದು   

ನಾಗಮಂಗಲ: ‘ಕೋವಿಡ್‌ ಸಂದರ್ಭದಲ್ಲಿ ರೈತರ ಬೆಳೆ ಮಾರಾಟ ಮಾಡಲು ಎಪಿಎಂಸಿಯಲ್ಲಿ ನಿಗದಿ ಮಾಡಿರುವ ಸಮಯ ಅವೈಜ್ಞಾನಿಕವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಮಣ್ಣುಪಾಲಾಗುತ್ತಿವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಸಮಯ ಮಾರುಕಟ್ಟೆ ಅವಧಿ ನಿಗದಿ ಮಾಡಲಾಗಿದೆ. ನಂತರ ಬಂದ ರೈತರಿಗೆ ಎಪಿಎಂಸಿ ಆವರಣದೊಳಗೆ ಬಿಡದ ಕಾರಣ ಬಾಡಿಗೆಗೆ ತಂದ ವಾಹನಗಳು ತರಕಾರಿ ಸೇರಿದಂತೆ ಬೆಳೆಗಳನ್ನು ರಸ್ತೆಯಲ್ಲೇ ಸುರಿದು ಹೋಗುತ್ತಿದ್ದು, ಇದರಿಂದಾಗಿ ರೈತರ ಬೆಳೆಗಳು ಎಪಿಎಂಸಿ ಮುಂದೆಯೇ ಮಣ್ಣು ಪಾಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸೌತೆ ಕಾಯಿ, ಸಾಂಬಾರ್ ಸೌತೆ, ಬೂದುಗುಂಬಳ, ದಪ್ಪ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಎಪಿಎಂಸಿ ಆವರಣ ಪ್ರವೇಶಕ್ಕೆ ಅವಕಾಶವಿಲ್ಲದೇ ರಸ್ತೆಯಲ್ಲಿ ಹಾಳಾಗುತ್ತಿವೆ.

ADVERTISEMENT

ಅಲ್ಲದೇ ಬೆಳಿಗ್ಗೆ 6ರಿಂದ 10 ಗಂಟೆಯ ಅವಧಿಗೆ ಬೆಳೆಯನ್ನು ಕಟಾವು ಮಾಡಲು ಕಾರ್ಮಿಕರು ಸಿಗುವುದಿಲ್ಲ. ಒಂದು ದಿನ ಮೊದಲೇ ಕಟಾವು ಮಾಡಿದರೆ ಹಾಳಾಗುವ ಭೀತಿ ಇರುತ್ತದೆ. ಲಾಕ್‌ಡೌನ್‌ನಲ್ಲಿ ರೈತರು ತರಕಾರಿಯನ್ನು ಎಪಿಎಂಸಿಗೆ ತಂದು ಮಾರಾಟ ಮಾಡಲು ನಿಗದಿ ಮಾಡಿರುವ ಸಮಯವು ಅವೈಜ್ಞಾನಿಕವಾಗಿದೆ ಎಂದು ಆರೋಪಿಸುತ್ತಾರೆ. ಕಡೇ ಪಕ್ಷ ಬೆಳೆಯನ್ನು ಎಪಿಎಂಸಿಯೊಳಗೆ ಇಡಲು ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಸುಮಾರು 7 ಟನ್ ಸೌತೆಕಾಯಿ ಬೆಳೆದಿದ್ದು, ಎಪಿಎಂಸಿಯಲ್ಲಿ ನಿಗದಿ ಮಾಡಿರುವ ಅವಧಿಯಲ್ಲೇ ಮಾರಾಟ ಮಾಡಲು ಸಮಸ್ಯೆಯಾಗಿದೆ. ಅಧಿಕಾರಿಗಳನ್ನು ಕೇಳಿದರೆ ನಮಗೇನು ಹೇಳಬೇಡಿ ಎನ್ನುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆ ಹಾಳಾಗುತ್ತಿವೆ’ ಎಂದು ತಾಲ್ಲೂಕಿನ ಎಂ.ಹೊಸೂರಿನ ರೈತ ಸುರೇಶ್ ಹೇಳಿದರು.

‘ರೈತರಿಗೆ ಸಮಸ್ಯೆಯಾಗುತ್ತಿರುವ ಕುರಿತು ನನ್ನ ಗಮನಕ್ಕೆ ಬಂದಿದ್ದು, ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ’ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.