ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನನೆರೆ ಮತ್ತು ಆಲಗೂಡು ಬಳಿ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಸಂಪರ್ಕ ನಾಲೆಗೆ ನಿರ್ಮಿಸಿರುವ ಸುರಂಗದ ಆಸುಪಾಸಿನಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರು ಬೃಹತ್ ಪ್ರಮಾಣದಲ್ಲಿ ಸ್ಫೋಟ ನಡೆಸುತ್ತಿದ್ದು, ಸುರಂಗ ಕುಸಿಯುವ ಆತಂಕ ಎದುರಾಗಿದೆ.
ವಿಶ್ವೇಶ್ವೇಶ್ವರಯ್ಯ ನಾಲೆಯಿಂದ ಮಳವಳ್ಳಿ ಭಾಗಕ್ಕೆ ನೀರು ಹರಿಸಲು ತೋಡಿರುವ ನಾಲೆಗೆ 1.2 ಕಿ.ಮೀ. ಉದ್ದದ ಸುರಂಗ ನಿರ್ಮಿಸಲಾಗಿದೆ. ಈ ಸುರಂಗದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸಲಾಗುತ್ತಿದೆ. ಸ್ಫೋಟದ ರಭಸಕ್ಕೆ ಸುರಂಗದಲ್ಲಿ ಕುಸಿತ ಉಂಟಾದರೆ, ಮುಂದಿನ ಭಾಗಕ್ಕೆ ನೀರು ಹರಿಯುವುದು ಸ್ಥಗಿತಗೊಳ್ಳಲಿದೆ. ಸುರಂಗದ ನೂರಿನ್ನೂರು ಮೀಟರ್ ದೂರದಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರು ಸ್ಫೋಟ ನಡೆಸುತ್ತಿದ್ದರೂ ಅದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಚನ್ನನಕೆರೆ ಸಮೀಪ ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಅಡೆತಡೆಯಿಲ್ಲದೆ ನಡೆಯುತ್ತಿದೆ. ಬೃಹತ್ ಪ್ರಮಾಣದಲ್ಲಿ ಸ್ಫೋಟಗಳು ನಡೆಯುತ್ತಿವೆ. ಖಾಸಗಿ ಜಮೀನುಗಳಲ್ಲಿ ಕೂಡ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಗಣಿಗಾರಿಕೆ ನಡೆಯುವ ಅಕ್ಕ ಪಕ್ಕದ ಕೃಷಿ ಜಮೀನುಗಳಿಗೆ ಕಲ್ಲು ಮತ್ತು ದೂಳು ಬೀಳುತ್ತಿದ್ದು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ’ ಎಂದು ಹನುಮಂತು, ಸುರೇಶ್, ಯೋಗೇಶ್ ದೂರಿದ್ದಾರೆ.
‘ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಆದರೆ, ಕೆಲವು ಪಟ್ಟಾ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅದು ಅಕ್ರಮವೋ ಸಕ್ರಮವೋ ಗೊತ್ತಿಲ್ಲ. ಆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎಂ. ನಾಗರಾಜು ಹೇಳಿದ್ದಾರೆ.
‘ಚನ್ನನಕೆರೆ ಇತರೆಡೆ 24 ಮಂದಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದಾರೆ. ವಿಶ್ವೇಶ್ವರಯ್ಯ ನಾಲೆ ಸಂಪರ್ಕ ನಾಲೆಯ ಸುರಂಗದ ಪಕ್ಕ ಅಥವಾ ಇತರೆಡೆ ನಿಯಮ ಬಾಹಿರವಾಗಿ ಗಣಿಗಾರಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.