ADVERTISEMENT

ಗಗನಕುಸುಮವಾದ ಕುಡಿವ ನೀರು

ಹಲಗೂರು ಭಾಗದಲ್ಲಿ ನೀರಿಗೆ ತತ್ವಾರ, ಕೊಳವೆಬಾವಿಗಳ ಮೇಲೆ ಅವಲಂಬನೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:58 IST
Last Updated 7 ಮೇ 2019, 19:58 IST
ಹಲಗೂರು ಸಮೀಪದ ನಿಟ್ಟೂರು ಹಲಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ (ಎಡಚಿತ್ರ). ಹುಸ್ಕೂರು ಗ್ರಾ.ಪಂ ವ್ಯಾಪ್ತಿಯ ಹುಲ್ಲಾಗಾಲ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿದೆ
ಹಲಗೂರು ಸಮೀಪದ ನಿಟ್ಟೂರು ಹಲಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ (ಎಡಚಿತ್ರ). ಹುಸ್ಕೂರು ಗ್ರಾ.ಪಂ ವ್ಯಾಪ್ತಿಯ ಹುಲ್ಲಾಗಾಲ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿದೆ   

ಹಲಗೂರು: ಬಿಸಿಲ ಬೇಗೆ ವಿಪರೀತ ವಾಗಿದ್ದು, ಜನ– ಜಾನುವಾರುಗಳ ಕುಡಿಯುವ ನೀರಿನ ದಾಹ ತೀರದಾಗಿದೆ.ಮಳೆ ಕೊರತೆಯಿಂದಾಗಿ ದಳವಾಯಿ ಕೋಡಿಹಳ್ಳಿ ಕೆರೆಯಲ್ಲಿ ನೀರಿಲ್ಲ. ಕೆಆರ್‌ಎಸ್‌ ಜಲಾಶಯದ ನೀರಿನಿಂದ ತುಂಬಿದ್ದ ಅಂತರವಳ್ಳಿ ಕೆರೆ ಸದ್ಯದಲ್ಲೇ ಬತ್ತಿ ಹೋಗುವ ಹಂತ ತಲುಪಿದೆ.

ಹಲಗೂರು, ಕಸಬಾ ಹೋಬಳಿಯ ಜನತೆಗೆ ಕುಡಿಯಲು ನೀರು ಎಂಬುದು ‘ಸಮುದ್ರದಲ್ಲಿ ಉಪ್ಪಿಗೆ ಕೊರತೆ’ಯಂತಾಗಿದೆ. ಈ ಭಾಗದಲ್ಲಿ ಕಾವೇರಿ, ಶಿಂಷಾ ನದಿಗಳು ಹರಿಯುತ್ತವೆ. ಕಾವೇರಿ ನದಿಯಿಂದ ತೊರೆಕಾಡನಹಳ್ಳಿ ನೀರು ಶುದ್ಧೀಕರಣ ಘಟಕದ ಮೂಲಕ ಬೆಂಗಳೂರು ಜನತೆಗೆ ನಾಲ್ಕು ಹಂತದಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. ಆದರೆ, ಹಲಗೂರು ಸೇರಿದಂತೆ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಗಗನ ಕುಸುಮವಾಗಿಯೇ ಉಳಿದಿದೆ.

ಹಲಗೂರು ಸಮೀಪದ ಹಂಡನಹಳ್ಳಿ, ಲಿಂಗಪಟ್ಟಣ, ಮಾರ ಗೌಡನಹಳ್ಳಿ, ಅಂತರವಳ್ಳಿ, ಹುಸ್ಕೂರು ಸೇರಿ ಹಲವಾರು ಗ್ರಾಮಗಳಿಗೆ ಕೊಳವೆಬಾವಿ ಮೂಲಕವೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಗಡುಸಾಗಿದ್ದು, ಸಾರ್ವಜನಿಕರು ವಿಧಿಯಿಲ್ಲದೆ ಆ ನೀರನ್ನೇ ಕುಡಿಯುವಂತಾಗಿದೆ. ಕೆಲವು ವೇಳೆ ವಿದ್ಯುತ್ ಅಭಾವದಿಂದಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ADVERTISEMENT

ಆರಂಭವಾಗದ ಶುದ್ಧ ನೀರು ಘಟಕಗಳು: ಸರ್ಕಾರ ಕುಡಿಯುವ ನೀರಿಗೆ ಆದ್ಯತೆ ನೀಡಿ ಹಲವು ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ, ಎರಡು ವರ್ಷಗಳು ಕಳೆದರೂ ಅವು ಉದ್ಘಾಟನಾ ಭಾಗ್ಯ ಕಂಡಿಲ್ಲ. ಎಚ್. ಬಸಾಪುರ ಗ್ರಾಮ ಪಂಚಾಯಿತಿಯ ಬಸವನಹಳ್ಳಿ, ಡಿ. ಹಲಸಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡ ಚೆನ್ನಿಪುರ ಗ್ರಾಮಗಳ ಘಟಕಗಳು ಒಂದು ದಿನವೂ ನೀರು ನೀಡಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಗ್ರಾಮಸ್ಥರು.

ನಿಟ್ಟೂರು ಹಲಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ನೂತನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆಗೆ ಕಾಯುತ್ತಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಾನುವಾರುಗಳ ದಾಹ ತಣಿಸಲು ಪ್ರತಿ ಗ್ರಾಮದಲ್ಲಿಯೂ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಇದರಿಂದ ಗುತ್ತಿಗೆದಾರರ ಜೇಬು ತುಂಬಿದೆಯೇ ಹೊರತು ಜಾನುವಾರುಗಳಿಗೆ ಯಾವುದೇ ಉಪಯುಕ್ತವಾಗಿಲ್ಲ. ಪರಿಣಾಮವಾಗಿ ಜಾನುವಾರುಗಳಿಗೂ ಜನರು ಉಪಯೋಗಿಸುವ ನೀರನ್ನೇ ಕುಡಿಸುತ್ತಿದ್ದಾರೆ.

ಈ ಭಾಗದಲ್ಲಿ ಶಿಂಷಾ ಮತ್ತು ಕಾವೇರಿ ನದಿಗಳು ಹರಿಯುತ್ತಿದ್ದು, ನೀರಿನ ಮೂಲಗಳು ಸಾಕಷ್ಟಿವೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಅಷ್ಟೇ. ಆದರೆ, ಜನಪ್ರತಿನಿಧಿಗಳಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ಫ್ಲೋರೈಡ್‌ಯುಕ್ತ ನೀರು

ಬ್ಯಾಡರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಫ್ಲೋರೈಡ್‌ ಅಂಶ ಪತ್ತೆಯಾಗಿದ್ದು, ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದಂತೆ ಅಂತರ್ಜಲ ಮಟ್ಟ ಇಳಿಮುಖವಾಗುತ್ತಾ ಹೋಗುತ್ತಿದೆ. ಪರಿಣಾಮವಾಗಿ ವಸತಿ ನಿಲಯದಲ್ಲಿರುವ ಕೊಳಾಯಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವೇ ದೃಢೀಕರಿಸಿದೆ.

‘ಈ ಬಗ್ಗೆ ಲಿಖಿತ ದೂರು ನೀಡಿದಾಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಶೀಘ್ರದಲ್ಲೇ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಶಾಸಕರ ಗಮನಕ್ಕೆ ತಂದರೂ ಇದೂವರೆಗೆ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ವಿದ್ಯಾರ್ಥಿನಿಯೊಬ್ಬರ ಪೋಷಕ, ಡಿ.ಹಲಸಹಳ್ಳಿಯ ಎಸ್. ಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.