ADVERTISEMENT

ಮದ್ದೂರು: 6 ದಿನಗಳಿಗೊಮ್ಮೆ ನೀರು ಪೂರೈಕೆ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ಹರಸಾಹಸ; 45 ಕಿ.ಮೀ ದೂರದಿಂದ ನೀರು ಸರಬರಾಜು

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:58 IST
Last Updated 10 ಮೇ 2019, 19:58 IST
ಮದ್ದೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಾಚನಹಳ್ಳಿ ನೀರು ಸರಬರಾಜು ಕೇಂದ್ರದಲ್ಲಿ ಹೊಸದಾಗಿ ಉಪಕರಣಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ
ಮದ್ದೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಾಚನಹಳ್ಳಿ ನೀರು ಸರಬರಾಜು ಕೇಂದ್ರದಲ್ಲಿ ಹೊಸದಾಗಿ ಉಪಕರಣಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ   

ಮದ್ದೂರು: ತಾಲ್ಲೂಕಿನ ಬಾಚನಹಳ್ಳಿ ನೀರು ಸರಬರಾಜು ಕೇಂದ್ರದಲ್ಲಿ ವಿದ್ಯುತ್ ಕೊರತೆ ಹಾಗೂ ಪೈಪ್‌ಲೈನ್ದುರಸ್ತಿಯಿಂದಾಗಿ ಪಟ್ಟಣದ 23 ವಾರ್ಡ್‌ಗಳಿಗೆ 5ರಿಂದ 7 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನಿವಾಸಿಗಳು ವಾರಗಟ್ಟಲೆ ನೀರು ಸಂಗ್ರಹಿಸಿ ಇಟ್ಟುಕೊಂಡು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ 15 ವರ್ಷಗಳಿಂದ ಶಿವನಸಮುದ್ರ ಬಳಿಯ ಬಾಚನಹಳ್ಳಿ ನೀರು ಸರಬರಾಜು ಕೇಂದ್ರದಿಂದ ಪಟ್ಟಣದ 23 ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಪಟ್ಟಣದಿಂದ 45 ಕಿ.ಮೀ ದೂರವಿದ್ದರೂ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನೀರು ಸರಬರಾಜು ಮಾಡುವ ಮಾರ್ಗ ಮಧ್ಯದಲ್ಲಿ ಯಾವುದೇ ತೊಂದರೆ ಸಂಭವಿಸಿದರೂ, ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ವೇಳೆ ವಾರಕ್ಕೊಮ್ಮೆ ಬರುವ ನೀರು 15 ದಿನಗಳವರೆಗೂ ಬರುವುದಿಲ್ಲ. ಈ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.

ಕಾವೇರಿ ನದಿಯಿಂದ ನೀರು ಸರಬರಾಜು ಮಾಡುವ ಮೂಲ ಸ್ಥಾವರ, ಬಾಚನಹಳ್ಳಿ ನೀರು ಸರಬರಾಜು ಕೇಂದ್ರ, ಕೆ.ಎಂ.ದೊಡ್ಡಿ ಬಳಿಯ ಪಂಪ್‌ಹೌಸ್‌ಗಳಿಗೆ ವಿದ್ಯುತ್ ಸಮರ್ಪಕವಾಗಿದ್ದರೆ ನೀರು ಬರುತ್ತದೆ. ಇಲ್ಲದಿದ್ದರೆ ನೀರಿನ ಅಭಾವ ಕಂಡುಬರುತ್ತದೆ. ಇದಕ್ಕೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

ADVERTISEMENT

ವಿಶ್ವೇಶ್ವರಯ್ಯನಗರ, ಕೆ.ಎಚ್.ನಗರ, ರಾಮ್ ರಹೀಂ ನಗರ, ಸಿದ್ಧಾರ್ಥನಗರ ಸೇರಿ ಹಲವೆಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ. ಈ ವೇಳೆ ಪಂಚಾಯಿತಿಗೆ ಕರೆ ಮಾಡಿ ನೀರು ಬಿಡುವಂತೆ ಜಗಳ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಶುದ್ಧ ಕುಡಿಯುವ ನೀರಿಗಾಗಿ ಪಟ್ಟಣದಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಪಂಚಾಯಿತಿಯಿಂದ ನೀರು ಬಾರದಿದ್ದರೆ, ನೀರಿನ ಘಟಕಗಳೇ ಜನರ ಆಸರೆಯಾಗಲಿವೆ.

ಕೆಲ ಸುಧಾರಿತ ಬಡಾವಣೆಗಳ ಬಹುತೇಕ ಮನೆಗಳಲ್ಲಿ ಕೊಳವೆಬಾವಿಗಳಿವೆ. ನೀರು ಬಂದರೂ, ಬಾರದಿದ್ದರೂ ನೀರಿನ ಸಮಸ್ಯೆ ಇವರಿಗೆ ಉದ್ಬವಿಸುವುದಿಲ್ಲ. ಆದರೆ, ಮಧ್ಯಮ ವರ್ಗದ ಜನರಿಗೆ ನೀರು ಬಿಡುವುದು ಒಂದು ದಿನ ವಿಳಂಬವಾದರೂ ನಿತ್ಯ ಕರ್ಮಗಳಿಗೆ ವಿಪರೀತ ತೊಂದರೆಯಾಗುತ್ತದೆ. ಇನ್ನು ಕೊಳೆಗೇರಿ ನಿವಾಸಿಗಳಿಗೆ ನೀರಿನ ಸಮಸ್ಯೆ ಸಾಮಾನ್ಯವಾಗಿದ್ದು, ಪಕ್ಕದ ಜಮೀನುಗಳ ಕೊಳವೆ ಬಾವಿಗಳನ್ನು ಆಶ್ರಯಿಸುವಂತಾಗಿದೆ.

ಪಟ್ಟಣದಲ್ಲಿ ಮೇಲ್ನೋಟಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ, ದೂರದ ನೀರಿಗೆ ಕೈಕಟ್ಟಿ ಕುಳಿತುಕೊಳ್ಳುವ ಬದಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ. ಜನರು ನೀರು ಸರಬರಾಜಿಗಾಗಿ ಕರೆ ಮಾಡಿದಾಗ ಅಧಿಕಾರಿಗಳು ಸೌಜನ್ಯ ವರ್ತಿಸಬೇಕು. ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ನರೇಂದ್ರ ಒತ್ತಾಯಿಸಿದರು.

ತುರ್ತು ಸಂದರ್ಭದಲ್ಲಿ ಟ್ಯಾಂಕರ್ ನೀರು
ನಗರೋತ್ಥಾನ ಯೋಜನೆಯಡಿ ₹2.95 ಕೋಟಿ ವೆಚ್ಚದಲ್ಲಿ ಬಾಚನಹಳ್ಳಿಯ ನೀರು ಸರಬರಾಜು ಕೇಂದ್ರದಲ್ಲಿ ಹೊಸದಾಗಿ ವಿದ್ಯುತ್‌ ಪರಿವರ್ತಕ, ಯಂತ್ರಗಳು ಹಾಗೂ ಪೈಪ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಜೂನಿಯರ್ ಕಾಲೇಜು ಆವರಣದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ವಾಟರ್‌ ಟ್ಯಾಂಕ್ ನಿರ್ಮಿಸಲಾಗುವುದು. ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ತುರ್ತಾಗಿ ನೀರು ಸರಬರಾಜು ಮಾಡಲು ಪುರಸಭೆಯ ಟ್ಯಾಂಕರ್‌ಗಳು ಸಿದ್ಧವಾಗಿವೆ ಎಂದು ಪುರಸಭೆಯ ಮುಖ್ಯಾಧಿಕಾರಿ ನಟರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.