ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಮಂಡ್ಯ: ‘ವಿಧಾನಸಭೆ ಹಾಗೂ ಲೋಕಸಭೆಗಳಲ್ಲೂ ಮಹಿಳೆಯರಿಗೆ ಮೀಸಲಾತಿ ನೀಡುವ ದಿನಗಳು ದೂರ ಇಲ್ಲ. ಮಹಿಳೆಯರು ಚುನಾಯಿತರಾಗಿ ಆಡಳಿತ ನಡೆಸುವುದಕ್ಕೆ ಸಜ್ಜಾಗಬೇಕು. ಆಡಳಿತ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ತಾಳ್ಮೆಯ ಪ್ರತಿರೂಪ ಎನ್ನುತ್ತಾರೆ. ಎದುರಾಗುವ ಸಮಸ್ಯೆಗಳನ್ನು ಸಮಾಧಾನದಿಂದ ಬಗೆಹರಿಸಿ. ಜ್ಞಾನವನ್ನು ವೃದ್ಧಿಸಿಕೊಳ್ಳಿ. ಇದರಿಂದ ಬಹಳಷ್ಟು ಕೆಲಸಗಳು ಸುಲಭವಾಗುತ್ತವೆ’ ಎಂದು ಕಿವಿಮಾತು ಹೇಳಿದರು.
‘ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿವೆ. ಯಾವುದೇ ಕ್ಷೇತ್ರವಾದರೂ ಮಹಿಳೆಯರು ಹಿಂಜರಿಯದೆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಬೇಕು’ ಎಂದರು.
ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ವಿಜೇತರಾದ ಮಹಿಳೆಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಜಿ.ಪಿ.ಎಲ್.ಎಫ್.ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಷುಗರ್ ಕಂಪನಿ ಅಧ್ಯಕ್ಷ ಸಿ.ಡಿ. ಗಂಗಾಧರ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್ ಪಾಲ್ಗೊಂಡಿದ್ದರು.
ವಿವಿಧ ಮಳಿಗೆಗಳು: ಮಹಿಳಾ ದಿನಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮೀನುಗಾರಿಕೆ, ಪಶು ಸಂಗೋಪಾಲನೆ, ಜಿಲ್ಲಾ ಪಂಚಾಯಿತಿ ಜಲಜೀವನ್ ಮಿಷನ್ ಸೇರಿದಂತೆ ಅನೇಕ ಮಳಿಗೆಗಳನ್ನು ತೆರೆಯಲಾಗಿತ್ತು.
ಸಾಲ ಪಡೆಯುವಾಗ ಎಚ್ಚರವಹಿಸಿ: ಎಚ್‌ಡಿಕೆ
‘ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಹಾಗೂ ಕಷ್ಟದ ಸಂದರ್ಭದಲ್ಲಿ ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳು ಮತ್ತು ಮೈಕ್ರೊ ಫೈನಾನ್ಸ್‌ಗಳಲ್ಲಿ ಸಾಲ ಪಡೆಯಬೇಕಾಗುತ್ತದೆ. ಅದರೆ ಸಾಲ ಪಡೆಯುವಾಗ ಮತ್ತು ವ್ಯವಹರಿಸುವಾಗ ಎಚ್ಚರಿಕೆಯಿಂದಿರಬೇಕು’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು. ಪ್ರತಿಯೊಂದು ಹಳ್ಳಿಗಳಲ್ಲಿ ಮಹಿಳೆಯರು ವಾರಕ್ಕೊಮ್ಮೆ ಗುಂಪು ಸೇರಿ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆಯನ್ನು ನಡೆಸಿ. ಅದರ ಬಗ್ಗೆ ಅರಿವು ಮೂಡಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಮಹಿಳೆಯರ ಬಲವರ್ಧನೆಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2 ಸಾವಿರ ನೀಡುತ್ತಿದ್ದೇವೆ. ಇದರಿಂದ ಎಷ್ಟೋ ಮಹಿಳೆಯರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.ಪಿ.ರವಿಕುಮಾರ್, ಶಾಸಕ
ಮಹಿಳೆಯರಿಗೆ ಕ್ರಿಕೆಟ್ ಕಬಡ್ಡಿ ಆಶುಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದ್ದೇವೆ.ಕೆ.ಆರ್.ನಂದಿನಿ, ಸಿಇಒ, ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.