ADVERTISEMENT

ಅಂಗವಿಕಲ ಮಸೂದೆ ಹೋರಾಟದ ಫಲವಲ್ಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:30 IST
Last Updated 14 ಅಕ್ಟೋಬರ್ 2011, 5:30 IST

ಮೈಸೂರು: ಅಂತರರಾಷ್ಟ್ರೀಯ ಒತ್ತಡದಿಂದ ಅಂಗವಿಕಲ ಮಸೂದೆ ಜಾರಿಯಾಗಿದೆಯೇ ಹೊರತು ಜನಲೋಕಪಾಲ ಮಸೂದೆಯಂತೆ ಎಲ್ಲೆಡೆ ಹೋರಾಟ ನಡೆದು, ಚರ್ಚೆಯಾಗಿ ಜಾರಿಗೆ ಬಂದಿಲ್ಲ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ವಿಭಾಗದ  ಆಯುಕ್ತ ಕೆ.ವಿ.ರಾಜಣ್ಣ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಗುರುವಾರ ಜಗನ್ಮೋಹನ ಅರಮನೆ ಯಲ್ಲಿ ನಡೆದ ವಿಶ್ವ ದೃಷ್ಟಿ ದಿನಾಚರಣೆ ಯಲ್ಲಿ ಅವರು ಮಾತನಾಡಿದರು. ಅಂಗವಿಕಲ ಮಸೂದೆ ಯಾರಿಗೂ ಮುಖ್ಯ ಅಂತ ಅನಿಸಲಿಲ್ಲ. ಯಾವ ಸಂಘ ಸಂಸ್ಥೆಗಳು ಇದರ ಬಗ್ಗೆ ಚರ್ಚೆ ಮಾಡಲಿಲ್ಲ. 1995 ರಲ್ಲಿ ಅಂತರ ರಾಷ್ಟ್ರೀಯ ಒತ್ತಡದ ಮೇರೆಗೆ ಅಂಗವಿಕಲ ಮಸೂದೆ ಜಾರಿಗೆ ಬಂದಿತು. ಆದರೆ, ಇಲ್ಲಿ ಎದುರಿಸಬೇಕಾದಂತಹ ಕಷ್ಟವೆಂದರೆ, ಫಲಾನುಭವಿಗಳ ನಿರ್ದಿಷ್ಟ ವಾದ ಅಂಕಿ-ಸಂಖ್ಯೆಗಳಿಲ್ಲ. ಇದರ ಕುರಿತು ಹೆಚ್ಚಿನ ಕಾರ್ಯವಾಗಬೇಕು. ಛತ್ತಿಸ್‌ಗಡ ಒಂದು ರಾಜ್ಯವನ್ನು ಬಿಟ್ಟರೆ ದೇಶದ ಬೇರೆ ಯಾವ ರಾಜ್ಯಗಳಲ್ಲಿಯೂ ಅಂಗವಿಕಲರ ಸಂಖ್ಯೆಯ ನಿರ್ದಿಷ್ಟ ಪ್ರಮಾಣವಿಲ್ಲ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದ ಅಂಕಿ-ಸಂಖ್ಯೆಗಳೇ ನಮಗೆ ಆಧಾರ ವಾಗಿವೆ. ಅಂಗವಿಕಲ ಕಲ್ಯಾಣ ಇಲಾಖೆ ಬಲವರ್ಧನೆ ಮುಖ್ಯವಾಗಿದೆ. ಅಂಗವಿಕಲರಿಗೆ ಎಲ್ಲ ರೀತಿಯ ಸೌಲಭ್ಯ ಗಳನ್ನು ನೀಡುವ ಕಾರ್ಯವಾಗಬೇಕು ಎಂದು ನುಡಿದರು.

ಸಿಇಓ ಜಿ. ಸತ್ಯವತಿ ಮಾತನಾಡಿ, ದೃಷ್ಟಿಯ ಬಗೆಗೆ ಎಲ್ಲರಲ್ಲೂ ಜನಜಾಗೃತಿ ಮೂಡಿಸಬೇಕು. ಅಂತಹ ಹೊಣೆಗಾರಿಕೆ ನಮ್ಮ ಮೇಲಿದೆ. ಬರೀ ಕ್ರಿಯಾ ಯೋಜನೆಗಿಂತ ಅದು ಫಲಾನುಭವಿ ಗಳಿಗೆ ಎಷ್ಟರ ಮಟ್ಟಿಗೆ ತಲುಪಿದೆ ಎಂದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಆಗಲೇ ಸರ್ಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ. ನಾವು ಬರೀ ಕಾರ್ಯಕ್ರಮ ಮಾಡಿದರೆ ಸಾಲದು, ಅಂಗವಿಕಲರ ಏಳಿಗೆಗಾಗಿ ಶ್ರಮಿಸಬೇಕು ಎಂದರು. ಜಿಲ್ಲಾ ಮಟ್ಟದಲ್ಲಿ ಅಂಗವಿಕಲ ಘಟಕ ಸ್ಥಾಪನೆ ಆಗಬೇಕು ಎಂದು ರಾಜ್ಯ ಆಯುಕ್ತ ಕೆ.ವಿ.ರಾಜಣ್ಣ ಅವರಲ್ಲಿ ಮನವಿ ಸಲ್ಲಿಸಿದರು.

ಜೆಎಸ್‌ಎಸ್ ಕಾನೂನು ಕಾಲೇಜು ಪ್ರಾಧ್ಯಾಪಕ ಎಂ.ಎಸ್.ವೇಣುಗೋಪಾಲ್ ಮಾತನಾಡಿ, ಅಂಗವೈಕಲ್ಯವನ್ನು ಶಾಪ ಎಂದು ತಿಳಿಯದ ಎಲ್ಲರಂತೆ ಬದುಕಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಎಂ.ಆರ್.ಸೀತಾರಾಮ್, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಪದ್ಮರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಧಾ, ಶಿಶು ಅಭಿವೃದ್ಧಿ ಅಧಿಕಾರಿ ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.