ADVERTISEMENT

ಅಂಡರ್‌ಪಾಸ್‌ ನಿರ್ಮಾಣಕ್ಕೆ ಒಪ್ಪಿಗೆ

ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ; ವಿಮಾನಯಾನ ಸಚಿವಾಲಯ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:59 IST
Last Updated 17 ಮೇ 2018, 5:59 IST
ಮೈಸೂರಿನ ವಿಮಾನ ನಿಲ್ದಾಣ
ಮೈಸೂರಿನ ವಿಮಾನ ನಿಲ್ದಾಣ   

ಮೈಸೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸುವ ಯೋಜನೆ ಕೈಗೆತ್ತಿಕೊಳ್ಳುವ ಕಾಲ ಮೂಡಿಬಂದಿದೆ.

ನಿಲ್ದಾಣದ ಮುಂದೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ (ಎನ್‌ಎಚ್‌–212) ಅಂಡರ್‌ಪಾಸ್‌ ನಿರ್ಮಿಸಿ ಅದರ ಮೇಲೆ ರನ್‌ವೇ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿದೆ. ಈ ವಿಚಾರವನ್ನು ಸಂಸದ ಪ್ರತಾಪಸಿಂಹ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್‌ ಕುಮಾರ್‌ ಸಿಂಗ್‌ ಕೂಡ ಈ ವಿಚಾರವನ್ನು ದೃಢಪಡಿಸಿದ್ದಾರೆ.

ಹಿಂದೆಯೂ ಈ ಯೋಜನೆಗೆ ಒಲವು ತೋರಲಾಗಿತ್ತು. ಆದರೆ, ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಯೋಜನೆ ಜಾರಿಯಾದಲ್ಲಿ ಈ ವ್ಯವಸ್ಥೆ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಇದಾಗಲಿದೆ.

ADVERTISEMENT

ರನ್‌ವೇ ಉದ್ದ ಕಡಿಮೆ ಇರುವುದರಿಂದ ಎಟಿಆರ್‌–76 ವಿಮಾನ ಹೊರತುಪಡಿಸಿ ಬೇರೆ ವಿಮಾನಗಳು ಬಂದಿಳಿಯಲು ಸಾಧ್ಯವಾಗುತ್ತಿಲ್ಲ. ಈಗ ರನ್‌ವೇ ಅನ್ನು 3,300 ಮೀಟರ್‌ಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಆಗ ಬೋಯಿಂಗ್‌–747 ಹಾಗೂ ಏರ್‌ಬಸ್‌ ಜಂಬೊ ವಿಮಾನ ಬಂದಿಳಿಯಬಹುದು. ನಿಲ್ದಾಣವನ್ನು ರಕ್ಷಣಾ ಪಡೆಯ ಉದ್ದೇಶಕ್ಕೆ ಬಳಕೆ ಮಾಡಲು ಹಾಗೂ ವಿವಿಧ ಸಂಸ್ಥೆಗಳ ವಿಮಾನಗಳನ್ನು ಇಲ್ಲಿ ನಿಲುಗಡೆ ಮಾಡುವ ಬಗ್ಗೆಯೂ ಯೋಜನೆಗಳಿವೆ.

ರನ್‌ವೇ ವಿಸ್ತರಣೆಗೆ ಶೀಘ್ರವೇ ಒಪ್ಪಿಗೆ ನೀಡುವಂತೆ ಮಾರ್ಚ್‌ನಲ್ಲಿ ಪ್ರತಾಪಸಿಂಹ ಅವರು ಕೇಂದ್ರ ನಾಗರಿಕ ವಿಮಾನ ರಾಜ್ಯ ಸಚಿವ ಜಯಂತ ಸಿನ್ಹಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಪರಿಣತರ ಸಮಿತಿಯು ವಿಮಾನ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ‘ಭದ್ರತಾ ಒಪ್ಪಿಗೆ’ ನೀಡಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ತಜ್ಞರ ತಂಡ ಉದ್ದೇಶಿತ ಯೋಜನೆಯ ಮಾರ್ಗದಲ್ಲಿ ಮಣ್ಣಿನ ಮಾದರಿಯನ್ನು ಕಲೆಹಾಕಿ ಪರೀಕ್ಷೆ ನಡೆಸಿತ್ತು.

ರಾಜ್ಯ ಸರ್ಕಾರವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಜಮೀನು ನೀಡುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.