ADVERTISEMENT

ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:02 IST
Last Updated 24 ಡಿಸೆಂಬರ್ 2017, 5:02 IST

ಕೆ.ಆರ್.ನಗರ: ತಾಲ್ಲೂಕಿನ ಕಾಳಮ್ಮನಕೊಪ್ಪಲು ಮತ್ತು ಹರದನ ಹಳ್ಳಿ ಗ್ರಾಮದ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ಗಣಿ ಗಾರಿಕೆ ಮಾಡಲಾಗುತ್ತಿದೆ ಎಂದು ಕಾಳಮ್ಮನಕೊಪ್ಪಲು ಮುಖಂಡರಾದ ಪುಟ್ಟೇಗೌಡ, ಸುಧಾಕರ್, ರವೀಂದ್ರ, ರಾಜೇಗೌಡ ಮತ್ತು ಮಹದೇವ್ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಾಳಮ್ಮನಕೊಪ್ಪಲು ಪುಟ್ಟೇಗೌಡ ಮಾತನಾಡಿ, ಕಾಳಮ್ಮನಕೊಪ್ಪಲು ಮತ್ತು ಹರದನಹಳ್ಳಿಯ ಸರ್ಕಾರಿ ಮತ್ತು ಖಾಸಗಿಯ ಸುಮಾರು 25 ಎಕರೆಗೂ ಹೆಚ್ಚು ಜಾಗದದಲ್ಲಿ 1990 ರಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ದೂರಿದರು.

ಇಲ್ಲಿ ದೊರೆಯುವ ಕಲ್ನಾರು ಮಣ್ಣು ಕೊಂಡೊಯ್ಯಲಾಗುತ್ತಿದೆ. 27 ವರ್ಷಗಳಿಂದ ಗಣಿಗಾರಿಕೆ ಮಾಡಿರುವು ದರಿಂದ 50, 80, 100 ಅಡಿ ಆಳದ ಗುಂಡಿಗಳು ಬಿದ್ದಿವೆ. ಮೇಯಲು ಹೋದ ಜಾನುವಾರು ಗುಂಡಿಗಳಿಗೆ ಬಿದ್ದು, ಮೃತಪಟ್ಟಿರುವುದು ಲೆಕ್ಕವೇ ಇಲ್ಲ. ದನ ಕಾಯಲು ಹೋದವರೂ ಗುಂಡಿಗೆ ಬಿದ್ದು ಮೃತಪಟ್ಟಿದ ಉದಾಹರಣೆಗಳೂ ಇವೆ ಎಂದು ಆರೋಪಿಸಿದರು.

ADVERTISEMENT

ಅಕ್ರಮ ಗಣಿಗಾರಿಕೆ ತಡೆಗಟ್ಟುವಂತೆ ಗಣಿಗಾರಿಕೆ ಮಾಡುವವರ ಹೆಸರು, ವಿಳಾಸ, ವಾಹನಗಳ ಸಂಖ್ಯೆ ಮಾಹಿತಿಯೊಂದಿಗೆ ಹಲವು ಬಾರಿ ಪೊಲೀಸ್ ಠಾಣೆ, ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ತಹಶೀಲ್ದಾರ್, ಪೊಲೀಸರು ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕೊಂಡು ಹೋಗಿದ್ದಾರೆ. ಮನವಿ ಸಲ್ಲಿಸಿದ ಎರಡು ದಿನಗಳವರೆಗೆ ಇಲವಾಲ, ಬಿಳಿಕೆರೆ, ಹುಣಸೂರು ಪೊಲೀಸ್ ಠಾಣೆಗಳಲ್ಲಿ ಕಲ್ನಾರು ಮಣ್ಣು ಸಾಗಿಸುವ ವಾಹನ ತಡೆದು ದಂಡ ಹಾಕಿ ಬಿಟ್ಟು ಕಳುಹಿಸಿದ್ದಾರೆ. ಇದರಿಂದ ಗಣಿಗಾರಿಕೆ ಯಲ್ಲಿ ತೊಡಗಿರುವ ವ್ಯಕ್ತಿಗಳು ದಂಡ ಕಟ್ಟಿ ಮತ್ತೆ ಎಂದಿನಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಗ್ರಾಮಗಳ ಪಕ್ಕದಲ್ಲಿ ಮಣ್ಣು ತೆಗೆಯುತ್ತಿರುವುದರಿಂದ ಗ್ರಾಮಕ್ಕೂ ಧೂಳು ವ್ಯಾಪಿಸಿದೆ. ಹಲವರು ಆಸ್ತಮಾ, ಅಲರ್ಜಿ ಇತರೆ ಕಾಯಿಲೆಗಳಿಂದ ಬಳಲು ತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು, ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡಲಾ ಗುವುದು ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.