ADVERTISEMENT

ಅನಾವರಣಗೊಂಡ ಸಿರಿಧಾನ್ಯ ಸಿರಿವಂತಿಕೆ...

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 5:38 IST
Last Updated 29 ಡಿಸೆಂಬರ್ 2017, 5:38 IST
ಇಂದಿನ ಜೀವನ ಪದ್ಧತಿ ಮತ್ತು ಆಹಾರ ಶೈಲಿಯಿಂದಾಗಿ ನೂರಾರು ಬಗೆಯ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಜತೆಗೆ, ಭೂಮಿಯ ಫಲವತ್ತತೆಯೂ ಕ್ಷೀಣವಾಗಿದೆ.
ಇಂದಿನ ಜೀವನ ಪದ್ಧತಿ ಮತ್ತು ಆಹಾರ ಶೈಲಿಯಿಂದಾಗಿ ನೂರಾರು ಬಗೆಯ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಜತೆಗೆ, ಭೂಮಿಯ ಫಲವತ್ತತೆಯೂ ಕ್ಷೀಣವಾಗಿದೆ.   

ಮೈಸೂರು: ಸಭಾಂಗಣದ ತುಂಬ ರಾಗಿ ಹಾಲಿನ ಪಾಯಸದ ಕಂಪು, ನವಣೆ ಪೊಂಗಲ್‌ನ ಸವಿ, ಕೊರಳೆಯ ಕಬಾಬ್‌, ಬರಗು ಅಕ್ಕಿಯ ಹಿಟ್ಟಿನ ಚಕ್ಕುಲಿಯ ಸ್ವಾದ ತುಂಬಿತ್ತು. ಮನೆಯಲ್ಲಿ ಸಿದ್ಧಪಡಿಸಿ ತಂದಿದ್ದ ಸಿರಿಧಾನ್ಯ ಖಾದ್ಯಗಳನ್ನು ಒಪ್ಪವಾಗಿ ಜೋಡಿಸಿ ನಾರಿಯರು ಮಾಹಿತಿ ನೀಡುತ್ತಿದ್ದರು. ಅವುಗಳ ಬಳಿ ಬಂದು ಮಾಹಿತಿ ಪಡೆಯುತ್ತಿದ್ದ ಕುತೂಹಲಿಗಳು. ರುಚಿ ನೋಡಿದ ತೀರ್ಪುಗಾರರು...

ಇದು ನಗರದ ಸ್ಕೌಟ್ಸ್‌ ಅಂಡ್‌ ಗೈಡ್ ಮೈದಾನದಲ್ಲಿ ಹಮ್ಮಿಕೊಂಡಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಗುರುವಾರ ಏರ್ಪಡಿಸಿದ್ದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ ಕಂಡು ಬಂದ ಚಿತ್ರಣ. 50 ಸ್ಪರ್ಧಿಗಳು ಮನೆಯಲ್ಲೇ ಖಾದ್ಯಗಳನ್ನು ಸಿದ್ಧಪಡಿಸಿ ತಂದಿದ್ದರು. ಖಾದ್ಯಗಳನ್ನು ಒಪ್ಪವಾಗಿ ಜೋಡಿಸಿ ಅದನ್ನು ತಯಾರಿಸಿದ ವಿಧಾನವನ್ನೂ ಬರೆದಿಟ್ಟಿದ್ದರು.

ರಾಗಿ ಹಾಲಿನ ಪಾಯಸ, ನವಣೆ ಹಾಲುಬಾಯಿ, ರಾಗಿಹಿಟ್ಟು, ನವಣೆಯ ಹಲ್ವ, ನವಣೆಯ ಸಿಹಿ ಪೊಂಗಲ್‌, ಸಾಮೆ, ಡ್ರೈಫ್ರುಟ್ಸ್‌ ಹಲ್ವ, ರಾಗಿ–ಊದಲು ಬರ್ಫಿ, ಕೊರಳೆ ಕಬಾಬ್‌, ನವಣೆ ಬಿರಿಯಾನಿ, ಅರ್ಕ ವೆಜಿಟೆಬಲ್‌ ಪಲಾವ್‌, ರಾಗಿ ಹಾಲು, ಬರಗು ನುಚ್ಚಿನ ಉಂಡೆ, ನವಣೆ ಬಿಸಿಬೇಳೆ ಬಾತ್, ಖಾರ ನವಣೆ ಪೊಂಗಲ್‌, ನವಣೆ ಚಟ್ನಿಪುಡಿ, ಸಜ್ಜೆ ಆಲೂ ರೊಟ್ಟಿ, ನವಣೆ ಚಿಕ್ಕಿ, ಜೋಳದ ಬರ್ಫಿ, ರಾಗಿ, ಅವರೆಕಾಳು ರೊಟ್ಟಿ, ನವಣೆ ಚಪಾತಿ ಮೊದಲಾದ ಖಾದ್ಯಗಳು ಗಮನ ಸೆಳೆದವು.

ADVERTISEMENT

ಬಹುಮಾನ ವಿಜೇತರು: ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ ಪ್ರೇಮರತ್ನಾ ಪ್ರಥಮ ಬಹುಮಾನ ಗೆದ್ದುಕೊಂಡರು. ಗೀತಾ ರಾವ್‌ (ದ್ವಿತೀಯ), ಶ್ರೀಮತಿ ಶ್ರೀಧರ್‌ (ತೃತೀಯ), ರೂಪಾ ನಾಗರಾಜ್‌, ದಿವ್ಯಲಕ್ಷ್ಮಿ, ವಸಂತಿ (ಸಮಾಧಾನಕರ ಬಹುಮಾನ) ಗೆದ್ದುಕೊಂಡರು.

ಐತಿಹಾಸಿಕ ಕೃಷಿ ಪದ್ಧತಿ: ‘ಸಾವಯವ ಕೃಷಿ ಏಕೆ?, ಹೇಗೆ?, ಸಾವಯವ ಪ್ರಮಾಣೀಕರಣ, ಸಾವಯವ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟ’ ಕುರಿತ ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿದ ನಾಗನಹಳ್ಳಿ ಸಾವಯವ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ.ಗೋವಿಂದರಾಜು, ಭಾರತೀಯ ಕೃಷಿ ಪದ್ಧತಿಗೆ 10,000 ವರ್ಷಗಳ ಇತಿಹಾಸ ಇದೆ. ಪರಿಸರಕ್ಕೆ ಹತ್ತಿರವಾಗಿರುವ ಪದ್ಧತಿಯೇ ಸಾವಯವ ಕೃಷಿ ಎಂದರು.

ಇಂದಿನ ಜೀವನ ಪದ್ಧತಿ ಮತ್ತು ಆಹಾರ ಶೈಲಿಯಿಂದಾಗಿ ನೂರಾರು ಬಗೆಯ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಜತೆಗೆ, ಭೂಮಿಯ ಫಲವತ್ತತೆಯೂ ಕ್ಷೀಣವಾಗಿದೆ. ಕೊಟ್ಟಿಗೆ ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರಗಳ ಬಳಕೆಯನ್ನು ರೈತರು ಕಡಿಮೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಭೂಮಿಯ ಪೋಷಕಾಂಶಗಳು ನಷ್ಟವಾಗದಂತೆ ವೈಜ್ಞಾನಿಕವಾಗಿ ಕಾಂಪೋಸ್ಟ್‌ ಗೊಬ್ಬರ ತಯಾರಿಸಬೇಕು ಎಂದು ಸಲಹೆ ನೀಡಿದರು.

ಸಾವಯವ ಪದ್ಧತಿಯ ಕೃಷಿಗೆ ರೋಗ, ಕೀಟ ಬಾಧೆ ಕಡಿಮೆ. ಅತಿಯಾದ ನೀರು, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಕ್ಷಾರವಾಗುತ್ತಿದೆ. ಈ ಕಾರಣದಿಂದ ಸಾವಯವ ಪದ್ಧತಿಯಲ್ಲಿ ಸಮಗ್ರ ಕೃಷಿ ಅನುಸರಿಸಬೇಕು ಎಂದರು.

ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಲಲಿತಾ ಭಾಸ್ಕರ್‌, ರಾಮನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಎಸ್‌.ಎಂ. ದೀಪಜಾ, ಕೃಷಿ ಇಲಾಖೆ ಉಪನಿರ್ದೇಶಕರಾದ ಚಂದ್ರಕಲಾ, ಶಿವಕುಮಾರ್‌, ಮೈಸೂರು, ಮಂಡ್ಯ ಮತ್ತು ಚಾಮರಾಜ ಜಿಲ್ಲೆಗಳ ಪ್ರಾಂತೀಯ ಸಹಕಾರ ಕೃಷಿಕರ ಸಂಘಟಗಳ ಒಕ್ಕೂಟದ ಅಧ್ಯಕ್ಷ ರಮೇಶ್ ಪಿ.ರಂಗಸಮುದ್ರ, ಕಾರ್ಯಕ್ರಮ ಆಯೋಜಕಿ ಗೌರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.