ADVERTISEMENT

ಅಪಾಯದಲ್ಲಿ ಕೌಟುಂಬಿಕ ವ್ಯವಸ್ಥೆ; ವಿಷಾದ

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ 11 ಜೋಡಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 7:37 IST
Last Updated 5 ಮಾರ್ಚ್ 2018, 7:37 IST

ಸರಗೂರು: ಇಲ್ಲಿನ ಬಿಡಗಲು ಪಡುವಲ ವಿರಕ್ತಮಠದಲ್ಲಿ ಭಾನುವಾರ ನಡೆದ ವೀರಶೈವ ವಧು– ವರರ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 11 ಜೋಡಿ ದಾಂಪತ್ಯಕ್ಕೆ ಕಾಲಿಟ್ಟವು.

ಬಿಡಗಲು ಪಡುವಲ ವಿರಕ್ತಮಠದ ಮಹದೇವ ಸ್ವಾಮೀಜಿ, ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ, ಪುರ ಪಟ್ಟದಮಠದ ಚಂದ್ರಶೇಖರ ಸ್ವಾಮೀಜಿ, ಮೈಸೂರು ಕುದೇರು ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಮಾದಾಪುರ ಪಟ್ಟದಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾಂಗಲ್ಯ ವಿತರಿಸಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ದಡದಹಳ್ಳಿ ಪಟ್ಟದಮಠದ ಷಡಕ್ಷರ ಸ್ವಾಮೀಜಿ, ಮಾನವ ದುಶ್ಚಟಕ್ಕೆ ದಾಸನಾಗಿದ್ದಾನೆ. ಧರ್ಮ ಕಾಪಾಡುವಲ್ಲಿ ಹಿಂದೇಟು ಹಾಕುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಆಧುನಿಕತೆಗೆ ಒಳಗಾಗಿ ಆಡಂಬರದ ಜೀವನಕ್ಕೆ ಬಲಿಯಾಗುತ್ತಿದ್ದಾನೆ. ಸರಳ ಜೀವನ ನಡೆಸುವವರು ಬೆರೆಣಿಕೆಯಷ್ಟು ಮಾತ್ರ ಇದ್ದಾರೆ. ಮಕ್ಕಳಲ್ಲಿ ತಂದೆ– ತಾಯಂದಿರ ಬಾಂಧವ್ಯ ಇಲ್ಲವಾಗಿದೆ. ಇದರಿಂದ ಅನಾಥಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ ಎಂದರು.

ಮೈಸೂರಿನ ಕುಂದೂರು ಮಠದ ಡಾ.ಶರತ್ ಸ್ವಾಮೀಜಿ ಮಾತನಾಡಿ, ಕೌಟುಂಬಿಕ ವ್ಯವಸ್ಥೆ ಅಪಾಯದ ಹಂಚಿನಲ್ಲಿದೆ. ಮನುಷ್ಯರಲ್ಲಿ ಸಂಬಂಧದ ಬಗ್ಗೆ ಅರಿವಿಲ್ಲದಂತಾಗಿದೆ. ಸಮಾಜದ ಒಳಿತಿಗಾಗಿ ಪೋಷಕರು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು ಎಂದರು.

ಪಡಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ಹುಲ್ಲಹಳ್ಳಿಯ ವಿರಕ್ತಮಠದ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿದ್ದರು.

ಜಕ್ಕಹಳ್ಳಿ ಬಿಕ್ಷದಮಠದ ನಂದೀಶ ಸ್ವಾಮೀಜಿ, ಆಲತ್ತಾಳಹುಂಡಿ ಬಿಕ್ಷದಮಠದ ಗಂಗಾಧರ ಸ್ವಾಮೀಜಿ, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಜಿ.ಪಂ ಮಾಜಿ ಸದಸ್ಯ ಅನಿಲ್ ಚಿಕ್ಕಮಾದು, ಪ.ಪಂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.