ADVERTISEMENT

‘ಆನ್‌ಲೈನ್‌ನಲ್ಲಿ ಪಹಣಿಪತ್ರ ಪಡೆಯಿರಿ’

ಗ್ರಾಮ ಪಂಚಾಯಿತಿಯಲ್ಲೂ ವಿವಿಧ ದಾಖಲೆಗಳು ಲಭ್ಯ: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 7:03 IST
Last Updated 9 ಜೂನ್ 2018, 7:03 IST

ಹುಣಸೂರು: ‘ರೈತರು ಕೃಷಿ ಸಾಲ ಮತ್ತು ಇತರೆ ಸೌಲಭ್ಯಕ್ಕಾಗಿ ಪಹಣಿ ಪಡೆಯಲು ನಾಡಕಚೇರಿ ಅಥವಾ ತಹಶೀಲ್ದಾರ್‌ ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ ಆನ್‌ಲೈನ್‌ನಲ್ಲಿ ಪಹಣಿ ಪಡೆಯಬಹುದಾಗಿದೆ’ ಎಂದು ತಹಶೀಲ್ದಾರ್‌ ಶುಕ್ರವಾರ ಮಹೇಶ್ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ‘ಕಂದಾಯ ಇಲಾಖೆ ಪಹಣಿ ಪತ್ರವನ್ನು ಡಿಜಿಟಲೀಕರಣ ಮಾಡಲಾಗಿದ್ದು, ಆನ್‌ಲೈನ್‌ ಮೂಲಕ ಕಂಪ್ಯೂಟರ್‌ ಕೇಂದ್ರಗಳಲ್ಲಿ ಪಹಣಿ ಸೇರಿದಂತೆ ಇತರೆ ಎಲ್ಲ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಪಹಣಿಯಲ್ಲಿ ಬಾರ್‌ ಕೋಡ್‌ ಇರುವುದರಿಂದ ಸಾರ್ವಜನಿಕರು ಕಂಪ್ಯೂಟರ್‌ ಕೇಂದ್ರಗಳಲ್ಲಿ ಪಡೆಯುವ ಪಹಣಿಗಳಿಗೆ ಗ್ರಾಮ ಲೆಕ್ಕಿಗರ ಸಹಿ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

ಮನೆಯಲ್ಲೇ ಪಡೆಯಬಹುದು: ಸಾರ್ವಜನಿಕರು ತಮಗೆ ಸೇರಿದ ಭೂಮಿ ದಾಖಲೆಯನ್ನು ತಮ್ಮ ಮನೆಗಳಲ್ಲೇ ಪಡೆಯಬಹುದಾಗಿದೆ. ಕಂದಾಯ ಇಲಾಖೆಯ ವೆಬ್‌ ಸೈಟ್‌ www.bhoomikar.nic.in ಮೂಲಕ ದಾಖಲೆಯನ್ನು ಕಂಪ್ಯೂಟರಿನಲ್ಲಿ ನೋಡಬಹುದು ಮತ್ತು ನಕಲು ಪಡೆಯಬಹುದಾಗಿದೆ ಎಂದರು.

ADVERTISEMENT

ತಾಲ್ಲೂಕಿನ ನಾಲ್ಕು ಹೋಬಳಿ ಕೇಂದ್ರದ ನಾಡಕಚೇರಿ ಮತ್ತು ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ಪಹಣಿಗಳನ್ನು ಸಾರ್ವಜನಿಕರು ಸರ್ಕಾರ ನಿಗದಿಪಡಿಸಿರುವ ದರ ₹ 10 ಪಹಣಿಗೆ ಮತ್ತು ₹ 15 ಮ್ಯುಟೇಶನ್‌ ಪಡೆಯಲು ಪಾವತಿಸಿ ಪಡೆಯಬಹುದಾಗಿದೆ ಎಂದರು.

ಡುಪ್ಲಿಕೇಟ್ ಅಸಾಧ್ಯ: ಪಹಣಿ ಮತ್ತು ಮ್ಯುಟೇಶನ್‌ಗಳನ್ನು ಯಾವುದೇ ಕಾರಣದಿಂದಲೂ ಡುಪ್ಲಿಕೇಟ್ ಮಾಡಲು ಸಾಧ್ಯವಿಲ್ಲ. ಪಹಣಿ ಪಡೆಯುವ ಹಂತದಲ್ಲಿ ಇಲಾಖೆ ನೀಡಿರುವ ಕೋಡ್‌ ಸಂಖ್ಯೆ ಹಾಕಬೇಕಿದ್ದು, ಆ ಕೋಡ್‌ ಸಂಖ್ಯೆ ಕಂಪ್ಯೂಟರ್‌ನಲ್ಲಿ ಇದ್ದಲ್ಲಿ ಮಾತ್ರ ಪಹಣಿ ಅಥವಾ ಯಾವುದೇ ದಾಖಲು ಪತ್ರ ಸಿಗಲು ಸಾಧ್ಯ. ಇದರಿಂದಾಗಿ ಯಾರೂ ನಕಲಿ ಸೃಷ್ಟಿಸಲು ಅಸಾಧ್ಯ ಎಂದರು.

ಲಭ್ಯತೆ: ಆನ್‌ಲೈನ್ ಮೂಲಕ ಗೇಣಿ ರಹಿತ ದೃಢೀಕರಣಪತ್ರ, ವ್ಯವಸಾಯಗಾರರ ಕುಟುಂಬದ ಪತ್ರ, ಜಮೀನು ಇಲ್ಲದ ಪತ್ರ, ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರ ಪತ್ರ, ಕೃಷಿ ಕಾರ್ಮಿಕ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಬೋನಫೈಡ್‌ ದೃಢೀಕರಣ ಪತ್ರ, ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ ಮತ್ತು ವ್ಯವಸಾಯಗಾರ ದೃಢೀಕರಣ ಪತ್ರ, ವಂಶವೃಕ್ಷ, ಆದಾಯ ಪ್ರಮಾಣ ಪತ್ರ, ಜೀವಿತ ಪ್ರಮಾಣ ಪತ್ರ, ಅಲ್ಪಸಂಖ್ಯಾತ ಪತ್ರ, ಒ.ಬಿ.ಸಿ. ಪತ್ರ, ಜನಸಂಖ್ಯೆ ಪತ್ರ, ವಾಸಸ್ಥಳ ದೃಢೀಕರಣ, ಸಾಮಾಜಿಕ ಭದ್ರತೆ ಯೋಜನೆ, ನಿರುದ್ಯೋಗ ದೃಢೀಕರಣ ಪತ್ರ, ವಿಧವಾ ಪತ್ರಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.