ADVERTISEMENT

ಆಶೋದಯ ಕಾರ್ಯಕರ್ತೆಯರ ರಂಗ-ಪ್ರಸಂಗ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 7:09 IST
Last Updated 7 ಜೂನ್ 2013, 7:09 IST
ಮೈಸೂರಿನಲ್ಲಿರುವ ಆಶೋದಯ ಸಮಿತಿ ಸಭಾಂಗಣದಲ್ಲಿ `ಸಾಮ್ರಾಟ್ ಸುಯೋಧನ' ನಾಟಕದ ತಾಲೀಮಿನಲ್ಲಿ ತೊಡಗಿರುವ ಆಶೋದಯ ಸಮಿತಿ ಕಾರ್ಯಕರ್ತೆಯರು (ಎಡಚಿತ್ರ). ನಾಟಕದ ನಿರ್ದೇಶಕ ಜಿ. ಚಂದ್ರಪ್ರಭಾ.
ಮೈಸೂರಿನಲ್ಲಿರುವ ಆಶೋದಯ ಸಮಿತಿ ಸಭಾಂಗಣದಲ್ಲಿ `ಸಾಮ್ರಾಟ್ ಸುಯೋಧನ' ನಾಟಕದ ತಾಲೀಮಿನಲ್ಲಿ ತೊಡಗಿರುವ ಆಶೋದಯ ಸಮಿತಿ ಕಾರ್ಯಕರ್ತೆಯರು (ಎಡಚಿತ್ರ). ನಾಟಕದ ನಿರ್ದೇಶಕ ಜಿ. ಚಂದ್ರಪ್ರಭಾ.   

ಮೈಸೂರು: ಮಂಗಳಮುಖಿಯರು ಎಂಬ ಹಣೆಪಟ್ಟಿ ಕಳಚಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಮುಂದಾಗಿರುವ ಆಶೋದಯ ಸಮಿತಿ ಕಾರ್ಯಕರ್ತೆಯರು ಪೌರಾಣಿಕ ನಾಟಕ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾರೆ.

ಮೈಸೂರಿನಲ್ಲಿರುವ ಆಶೋದಯ ಸಮಿತಿಯು ಕಳೆದ ಹಲವು ವರ್ಷಗಳಿಂದ ಮಂಗಳಮುಖಿಯರ ಪರ ಕೆಲಸ ನಿರ್ವಹಿಸುತ್ತ ಬಂದಿದೆ. ಈ ಸಂಸ್ಥೆಯಲ್ಲಿರುವ ಕಾರ್ಯಕರ್ತೆ ಯರು `ಸಾಮ್ರಾಟ್ ಸುಯೋಧನ' ನಾಟಕದ ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ರಂಗಕಲಾವಿದ ಜಿ. ಚಂದ್ರಪ್ರಭಾ ಅವರು ನಿರ್ದೇಶನದ ಹೊಣೆ ಹೊತ್ತಿದ್ದು, ಈಗಾಗಲೇ ತರಬೇತಿ ಆರಂಭಿಸಿದ್ದಾರೆ. ಕೂಲಿ ಕಾರ್ಮಿಕರು, ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳು, ಅನಾಥ ಮಕ್ಕಳಿಂದ `ನೀ ದೂರಾದೆಯಾ?', `ಸಮಾನತೆ' ಮತ್ತು `ಕಾಣದ ಕಡಲಿಗೆ' ನಾಟಕಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿ ಯಾಗಿದ್ದಾರೆ. `ಸಾಮ್ರಾಟ್ ಸುಯೋಧನ' ಮೂಲ ನಾಟಕವನ್ನು ಬಿ. ಪುಟ್ಟಸ್ವಾಮಯ್ಯ ರಚಿಸಿದ್ದು, ನಾಟಕದ ಸಂಭಾಷಣೆ, ಸಂಗೀತ, ಧ್ವನಿ, ಬೆಳಕು ಮತ್ತು ವಿನ್ಯಾಸವನ್ನು ಚಂದ್ರಪ್ರಭಾ ನಿರ್ವಹಿಸುತ್ತಿದ್ದಾರೆ. ಸಹ ನಿರ್ದೇಶಕರಾಗಿ ನಿಂಗರಾಜು ಎಣ್ಣೆಹೊಳೆ ಇವರಿಗೆ ಸಾಥ್ ನೀಡುತ್ತಿದ್ದಾರೆ.

ಒಂದು ಗಂಟೆ ಅವಧಿಯ ನಾಟಕ ಇದಾಗಿದ್ದು, ದುರ್ಯೋಧನ, ಭೀಷ್ಮ, ಶಕುನಿ, ವಿದುರ, ಭೀಮ, ಗಾಂಧಾರಿ, ಪಾಂಚಾಲಿ ಸೇರಿದಂತೆ 19 ಪಾತ್ರಗಳು ನಾಟಕದಲ್ಲಿವೆ. ಆಶೋದಯ ಸಮಿತಿ 28 ಕಾರ್ಯಕರ್ತೆಯರು ರಂಗತಾಲೀಮಿನಲ್ಲಿ ನಿರತರಾಗಿದ್ದಾರೆ. `ಸಮಾಜ ನಮ್ಮನ್ನು ಲೈಂಗಿಕ ಕಾರ್ಯಕರ್ತೆಯರು, ಭಿಕ್ಷಕರು ಎಂಬಂತೆ ನೋಡುತ್ತಿದ್ದು, ನಮಗೂ ಬದುಕಲು ಹಕ್ಕಿದೆ ಎಂಬುದನ್ನೇ ಮರೆತು ಬಿಟ್ಟಿದೆ. ನಾನು ಎಂಟನೇ ತರಗತಿಯಲ್ಲಿ ಇದ್ದಾಗಲೇ ಅಪ್ಪ, ಅಮ್ಮ ಮನೆಯಿಂದ ಹೊರಹಾಕಿದರು. ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ನಾಟಕದಲ್ಲಿ ಅಭಿನಯಿಸುತ್ತಿರುವುದರಿಂದ ಧೈರ್ಯ ಬಂದಿದ್ದು, ನಿಜಕ್ಕೂ ಇದೊಂದು ಹೊಸ ಅನುಭವ' ಎಂದು ಎಚ್.ಡಿ. ಕೋಟೆಯ ಶ್ರುತಿ ಅವರು ಹೇಳುತ್ತಾರೆ.

`ಈ ಮೊದಲು ನಾಟಕ, ಸಿನಿಮಾ ನೋಡಿದ್ದೆ. ಆದರೆ, ನಾನೇ ಅಭಿನಯ ಮಾಡುತ್ತಿರುವು ದರಿಂದ ನಾಟಕದ ಹಿಂದೆ ಎಷ್ಟೆಲ್ಲ ಶ್ರಮ ಇರುತ್ತದೆ ಎಂದು ಈಗ ಗೊತ್ತಾಗುತ್ತಿದೆ. ಈ ನಾಟಕ, ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ತಂದಿದೆ' ಎಂಬುದು ನಾಟಕದ ಪಾತ್ರಧಾರಿ ಮಹೇಶ್ ಅವರ ಅಭಿಪ್ರಾಯ.

`ಲೈಂಗಿಕ ಕಾರ್ಯಕರ್ತರಿಗೆ ಬೇರೇನೂ ಗೊತ್ತಿರುವುದಿಲ್ಲ ಎಂದು ಜನ ಭಾವಿಸಿದ್ದಾರೆ. ಸಮಾಜ ಯಾವಾಗಲೂ ನಮ್ಮನ್ನು ಕಳಂಕಿತ ರಂತೆ ನೋಡುತ್ತದೆ. ಇದರಿಂದ ಮನಸ್ಸಿಗೆ ನೋವಾಗುತ್ತದೆ. ಎಚ್.ಐ.ವಿ ಸೋಂಕಿನ ಬಗ್ಗೆ ತಿಳಿವಳಿಕೆ ಮೂಡಿಸಲು ಈ ಹಿಂದೆ ನಾಟಕ ಪ್ರದರ್ಶಿಸಿದ್ದೆವು. ಈಗ ಪೌರಾಣಿಕ ನಾಟಕ ಪ್ರದರ್ಶಿಸಲು ಅಣಿಯಾಗುತ್ತಿದ್ದೇವೆ. ನಮ್ಮ ಹಾಗೆ ನೋವು ಅನುಭವಿಸುತ್ತಿರುವ ಎಲ್ಲರಿಗೂ ಈ ನಾಟಕ ತಲುಪಬೇಕು' ಎಂಬುದು ಕೌನ್ಸಿಲರ್ ರಘು ಅವರ ಅಭಿಮತ.

`ಬಿ.ವಿ. ಕಾರಂತ ರಂಗ ತರಬೇತಿ ಶಿಬಿರ ಹೆಸರಿನಲ್ಲಿ ಇಲ್ಲಿನ ಕಾರ್ಯಕರ್ತೆಯರಿಗೆ ನಾಟಕ ಅಭ್ಯಾಸ ಮಾಡಿಸುತ್ತಿದ್ದೇನೆ. ರಂಗಾಯಣದಲ್ಲಿ ಪ್ರದರ್ಶನಗೊಳ್ಳುವ ನಾಟಕ ನೋಡಲು ಮತ್ತು ಅಲ್ಲಿ ಅಭಿನಯಿಸಲು ಮಂಗಳಮುಖಿಯರಿಗೂ ಅವಕಾಶ ಕಲ್ಪಿಸಬೇಕು. ಅವರಿಗೆ ಶೇ 50ರಷ್ಟು ರಿಯಾಯಿತಿ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಪೌರಾಣಿಕ ನಾಟಕಗಳು ನಶಿಸಿ ಹೋಗುತ್ತಿವೆ. ಹೀಗಾಗಿ, ಈ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ' ಎಂದು ನಾಟಕದ ನಿರ್ದೇಶಕ ಜಿ. ಚಂದ್ರಪ್ರಭಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.