ADVERTISEMENT

ಇಂದಿನಿಂದ ಧ್ವನಿ-ಬೆಳಕು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 6:55 IST
Last Updated 26 ಫೆಬ್ರುವರಿ 2011, 6:55 IST

ಮೈಸೂರು: ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಫೆ.26 ಮತ್ತು 27ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಇನ್ನೊವೇಟಿವ್ ಸಿಸ್ಟಮ್ಸ್ ಕಾರ್ಪೋರೇಷನ್, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕೋತ್ಸವಕ್ಕೆ 500 ವರ್ಷ ಸಂದ ಸವಿನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ 7.30ರಿಂದ 8.30ರವರೆಗೆ ಪ್ರದರ್ಶನ ನಡೆಯಲಿದೆ. ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, 2500 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

ಇನ್ನೊವೇಟಿವ್ ಸಿಸ್ಟಮ್ಸ್ ತಂಡದ ಸಹಾಯಕ ನಿರ್ದೇಶಕ ಎಂ.ಕೆ.ಮಠ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಗೀತ, ಕಲೆಗಳನ್ನು ಧ್ವನಿ-ಬೆಳಕಿನಲ್ಲಿ ಪ್ರದರ್ಶಿಸಲಾಗುವುದು. ಈ ಧ್ವನಿ-ಬೆಳಕಿನ ಕಾರ್ಯಕ್ರಮವನ್ನು ‘ಸನ್ ಎಟ್ ಲೂಮಿನೇರ್’ ಎಂದು ಕರೆಯಲಾಗುತ್ತದೆ. ವಿದ್ಯುತ್ ದೀಪಗಳು, ಚಾರಿತ್ರಿಕ ಘಟನೆಗಳ ಕುರಿತ ಹಿಮ್ಮೇಳಧ್ವನಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗಳು. ಇವುಗಳ ಮೂಲಕ ಸ್ಮಾರಕಗಳು, ಕಾಲಘಟ್ಟ, ಪರಂಪರೆ ವರ್ಣನೆ ಪ್ರೇಕ್ಷಕರಿಗೆ ಗತವೈಭವದ ಅನುಭವ ನೀಡುವುದು. ಈ ಪ್ರದರ್ಶನ ದೇಶದಲ್ಲಿ ಪ್ರಥಮ ಪ್ರಯತ್ನವಾಗಿದ್ದು, ವಿಜಯನಗರ ವೈಭವ ಪರಿಚಯದ ಅರಿವು ಮೂಡಿಸಲು ಕರ್ನಾಟಕದ 20 ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈಗಾಗಲೇ ಕಾರವಾರ, ಹಾಸನ, ಚಾಮರಾಜನಗರ ಸೇರಿದಂತೆ 8 ಜಿಲ್ಲೆಗಳಲ್ಲಿ ಪ್ರದರ್ಶನ ನಡೆದಿದೆ ಎಂದು ತಿಳಿಸಿದರು. 

ಕಾರ್ಯಕ್ರಮವು ಶ್ರೀಕೃಷ್ಣದೇವರಾಯನ ಜೀವನ ಮತ್ತು ಕಾಲ, ವಿವಿಧ ಆಕ್ರಮಣಗಳು, ಆಡಳಿತ ಕಥಾಹಂದರ ಹೊಂದಿದೆ. ಕೃತಕ ರಚನೆಗಳಲ್ಲಿ ಲೋಟಸ್ ಮಹಲ್, ವಿಠಲನ ದೇಗುಲ, ಕಲ್ಲಿನ ರಥ, ಕಡಲೆಕಾಳು, ಸಾಸಿವೆಕಾಳು ಗಣಪ, ಹಂಪಿ ಬಜಾರ್, ಅಕ್ಕಾತಂಗಿ ಬಂಡೆ, ಮಹಾನವಮಿ ದಿಬ್ಬ ಮುಂತಾದವುಗಳು ಪ್ರದರ್ಶನದಲ್ಲಿವೆ. ಚಿತ್ರರಂಗದ ಹೆಸರಾಂತ ಗಾಯಕರ ಧ್ವನಿಗಳನ್ನು ಅಳವಡಿಸಿ ಕಾರ್ಯಕ್ರಮ ರೂಪಸಿಲಾಗಿದೆ ಎಂದು ಅವರು ತಿಳಿಸಿದರು.ಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಶ್ರೀನಿವಾಸ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.