ADVERTISEMENT

ಇಳಿದ ತಾಪಮಾನ; ಹೆಚ್ಚಿದ ಹಸಿರು

ಆಗಾಗ ಸುರಿದ ಮಳೆಯಿಂದ ನಗರದಲ್ಲಿ ಹಿತಕರ ವಾತಾವರಣ

ಮಹಮ್ಮದ್ ನೂಮಾನ್
Published 21 ಮೇ 2018, 5:34 IST
Last Updated 21 ಮೇ 2018, 5:34 IST

ಮೈಸೂರು: ಏಪ್ರಿಲ್‌ ತಿಂಗಳಲ್ಲಿ ಬಿಸಿಲಿನ ತಾಪದಿಂದ ಬಸವಳಿದಿದ್ದ ನಗರದ ಜನರು ಮೇ ತಿಂಗಳಲ್ಲಿ ನಿಟ್ಟುಸಿರುಬಿಟ್ಟಿದ್ದಾರೆ. ಆಗಿಂದಾಗ್ಗೆ ಬಿದ್ದ ಮಳೆಯಿಂದ ಇಳೆ ತಂಪಾಗಿದ್ದು, ಹಿತಕರ ವಾತಾವರಣ ಕಂಡುಬಂದಿದೆ.

ಶನಿವಾರ ರಾತ್ರಿ ನಗರದೆಲ್ಲೆಡೆ ಧಾರಾಕಾರ ಮಳೆ ಸುರಿದಿದ್ದರೆ, ಭಾನುವಾರ ಇಡೀ ದಿನ ಮೋಡಕವಿದ ವಾತಾವರಣ ಇತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ ಕನಿಷ್ಠ ತಾಪಮಾನ 17.9 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ.

ಮೇ ತಿಂಗಳ ಮೂರನೇ ವಾರದಲ್ಲಿ ನಗರದಲ್ಲಿ ಸಾಮಾನ್ಯವಾಗಿ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಆದರೆ, ಸಾಮಾನ್ಯಕ್ಕಿಂತ ಸುಮಾರು ಮೂರು ಡಿಗ್ರಿ ಸೆಲ್ಶಿಯಸ್‌ ಕಡಿಮೆ ದಾಖಲಾಗಿದೆ. ಹಿಂದಿನ ಎರಡು ವರ್ಷಗಳಲ್ಲಿ ಮೇ ತಿಂಗಳಲ್ಲಿ ಇಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿರಲಿಲ್ಲ.

ADVERTISEMENT

ನಗರದಲ್ಲಿ ಏಪ್ರಿಲ್‌ ತಿಂಗಳಲ್ಲಿ ಚುನಾವಣೆಯ ಕಾವು ಏರಿದಂತೆ ತಾಪಮಾನವೂ ಒಂದೇ ಸಮನೆ ಏರಿಕೆಯಾಗಿತ್ತು. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್‌ವರೆಗೆ ತಲುಪಿತ್ತು. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಬಿಸಿಲಿನಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಆದರೆ ಮೇ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಹವಾಮಾನದಲ್ಲಿ ಬದಲಾವಣೆಯಾಗಿದೆ.

ನೀರಿಲ್ಲದೆ ಸೊರಗಿದ್ದ ಗಿಡಮರಗಳು ಮರುಜೀವ ಪಡೆದುಕೊಂಡಿವೆ. ರಸ್ತೆ ವಿಸ್ತರಣೆ ಮತ್ತು ವಿವಿಧ ನಿರ್ಮಾಣ ಕಾಮಗಾರಿಗಳಿಂದಾಗಿ ಎದ್ದಿದ್ದ ದೂಳಿನಿಂದ ಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಮತ್ತು ಮೃಗಾಲಯದ ಪರಿಸರ ಹಾಗೂ ನಗರದ ಉದ್ಯಾನಗಳಲ್ಲಿ ಹಸಿರು ಇನ್ನಷ್ಟು ಹೆಚ್ಚಿದೆ.

ಈ ತಿಂಗಳ 20ರ ವರೆಗೆ ನಗರದಲ್ಲಿ ಸರಾಸರಿ ತಾಪಮಾನ 32 ಡಿಗ್ರಿ ಸೆಲ್ಶಿಯಸ್‌ನಷ್ಟು ದಾಖಲಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ತಾಪಮಾನದಲ್ಲಿ ತುಂಬಾ ಇಳಿಕೆಯಾಗಿದೆ. ಮೇ 1ರಂದು 33.8 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ದಾಖಲಾಗಿತ್ತು. ಬಳಿಕದ ದಿನಗಳಲ್ಲಿ ತಾಪಮಾನ ಈ ಮಟ್ಟಕ್ಕಿಂತ ಏರಿಕೆಯಾಗಿಲ್ಲ.

ಹಿತಕರ ವಾತಾವರಣ ಮುಂದುವರಿಕೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ನಗರದಲ್ಲಿ ಇನ್ನೂ ಕೆಲವು ದಿನ ಹಿತಕರ ವಾತಾವರಣ ಮುಂದುವರಿಯಲಿದೆ. ಗರಿಷ್ಠ ಉಷ್ಣಾಂಶವು ಸರಾಸರಿ 32 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಶಿಯಸ್‌ ಇರಲಿದೆ.

ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಮುಂದಿನ ಮೂರು ದಿನ ರಾತ್ರಿಯ ವೇಳೆ ಸಾಧಾರಣ ಮಳೆಯಾಗಬಹುದು ಎಂದು ನಾಗನಹಳ್ಳಿ ಕೃಷಿ ಕೇಂದ್ರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.