ADVERTISEMENT

ಇ-ಹರಾಜು ಗೊಂದಲ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:08 IST
Last Updated 20 ಡಿಸೆಂಬರ್ 2012, 8:08 IST

ಹುಣಸೂರು: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಇ-ಹರಾಜು ಆರಂಭಗೊಂಡ ಬಳಿಕ ರೈತರಿಗೆ ಸೂಕ್ತ ದರ ಸಿಗುತ್ತಿಲ್ಲ. ಈ ವ್ಯವಸ್ಥೆ ಬೆಳೆಗಾರರಿಗೆ ಅಗತ್ಯವಿಲ್ಲ ಎಂದು ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ ಪ್ಲಾಟ್ ಫಾರಂ 2 ರಲ್ಲಿ ರೈತರು ಮಂಗಳವಾರ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಈ ಹಿಂದೆ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಮಾನವ ಶಕ್ತಿ ಅವಲಂಬಿಸಿ ನಡೆಯುತ್ತಿತ್ತು. ಪ್ರಸಕ್ತ ಸಾಲಿನಿಂದ ಇ-ಹರಾಜು ಪ್ರಕ್ರಿಯೆ ಮೂಲಕ ಆರಂಭಿಸಲಾಗಿದೆ. ಈ ತಂತ್ರಜ್ಞಾನದ ಮಾಹಿತಿ ಇಲ್ಲದೆ ಅತಂತ್ರರಾಗಿದ್ದೇವೆ.

ಇ-ಹರಾಜು ಮಾರುಕಟ್ಟೆಯಲ್ಲಿ ಭಾಗವಹಿಸುವ ಅನಕ್ಷರಸ್ಥ ರೈತರಿಗೆ ಹರಾಜು ಪ್ರಕ್ರಿಯೆ ತಿಳಿಯುತ್ತಿಲ್ಲ. ಅವಿದ್ಯಾವಂತ ರೈತರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿದ್ಯಾವಂತರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಂಬಾಕು ಬೆಳೆಗಾರ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡ ದೇವರಾಜು ದೂರಿದರು.

ಅತ್ರಂತ್ರ ವ್ಯವಸ್ಥೆಯಲ್ಲಿ ತಂತ್ರಜ್ಞಾನ:  ಮಾನವ ಶಕ್ತಿ ಬಳಸಿ ತಂಬಾಕು ಹರಾಜು ಮಾಡುವ ಹಂತದಲ್ಲಿ ಬೆಳೆಗಾರರಿಗೆ ಸ್ಥಳದಲ್ಲೇ  ಹೊಗೆಸೊಪ್ಪಿಗೆ ಎಷ್ಟು ಬೆಲೆ ಸಿಕ್ಕಿದೆ ಎಂಬುದು ತಿಳಿಯುತ್ತಿತ್ತು. ಇ-ಹರಾಜು ಪ್ರಕ್ರಿಯೆ ಆರಂಭಗೊಂಡ ನಂತರದಲ್ಲಿ ಇದ್ಯಾವುದೂ ತಿಳಿಯದಾಗಿದೆ.

ಟಿ.ವಿ.ಪರದೆ ಮೇಲೆ ತಂಬಾಕು ಖರೀದಿಯಾದ ದರ ಬಿತ್ತರಿಸುವ ವ್ಯವಸ್ಥೆ ಇ-ಹರಾಜು ಮಾರುಕಟ್ಟೆಯಲ್ಲಿ ಮಾಡಲಾಗಿದೆ. ಆದರೆ ಇ-ಹರಾಜು ಆರಂಭಗೊಂಡ 15 ದಿನದಲ್ಲೇ ಟಿ.ವಿಗಳು ಕೆಟ್ಟಿವೆ. ತಂಬಾಕು ಮಂಡಳಿ 50-60 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ತಂತ್ರಜ್ಞಾನ ಅನುಷ್ಟಾನಕ್ಕೆ ತಂದಿದ್ದರೂ ಗುಣಮಟ್ಟದ ಪದಾರ್ಥ ಖರೀದಿಸದೆ ಹಣ ಲೂಟಿ ಮಾಡಲಾಗಿದೆ.

ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಇ-ತಂತ್ರಜ್ಞಾನ ಬಂದ ನಂತರದಲ್ಲಿ ರೈತರು ಅತಂತ್ರರಾಗಿದ್ದಾರೆ. ಅವಿದ್ಯಾವಂತ ರೈತನಿಗೆ ಏಕಾ ಏಕಿ ಹೈಟೆಕ್ ತಂತ್ರಜ್ಞಾನ ಅಳವಡಿಸಿ ಎನೂ ತಿಳಿಯದಾಗಿದೆ ಎಂದು ತಂಬಾಕು ಬೆಳೆಗಾರ ಪಡಗಯ್ಯ ತಿಳಿಸಿದರು.

ಇ-ಹಾರಾಜು ಬೇಕು
ತಂಬಾಕು ಹರಾಜು ಮಾರುಕಟ್ಟೆಗೆ ಹೊಸದಾಗಿ ತಂದಿರುವ ಇ-ಹರಾಜು ವ್ಯವಸ್ಥೆ ಉತ್ತಮವಾಗಿದ್ದು, ಬೆಳೆಗಾರರಿಗೆ ದರದಲ್ಲಿ ಯಾವುದೇ ಗೊಂದಲವಾಗುತ್ತಿಲ್ಲ. ಹೊಸದರಲ್ಲಿ ಕೆಲವರಿಗೆ ಅರ್ಥವಾಗುತ್ತಿಲ್ಲ. ಈ ಹಿಂದಿನ ವ್ಯವಸ್ಥೆಯಲ್ಲಿ ಗೋಲ್ ಮಾಲ್ ನಡೆಯುತ್ತಿತ್ತು.

ADVERTISEMENT

ಈಗ ಅವೆಲ್ಲವೂ ಬಂದ್ ಆಗಿದೆ. ಹರಾಜು ಮಾರುಕಟ್ಟೆಯಲ್ಲಿ ಶೇ 90 ರೈತರು ಹೊಸ ಪದ್ಧತಿಗೆ ಹೊಂದಿಕೊಳ್ಳುತ್ತಿದ್ದಾರೆ ಎಂದು ತಂಬಾಕು ಬೆಳೆಗಾರರಾದ ಶ್ರೀನಿವಾಸ್, ಪ್ರಕಾಶ್, ಜಗದೀಶ್,ಸುರೇಶ್, ಸೋಮಶೇಖರ್, ಪ್ರಸನ್ನ ಹೇಳಿದ್ದಾರೆ.

ಮಂಡಳಿ ಇ-ಹರಾಜು ಬೇಕು ಬೇಡ ಎಂಬ ಬಗ್ಗೆ ಸಹಿ ಸಂಗ್ರಹ ನಡೆಸಿ ಅಂತಿಮ ತೀರ್ಮಾನವನ್ನು ಸದಸ್ಯರಿಗೆ ಬಿಟ್ಟು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ಲಾಟ್ ಫಾರಂ ವ್ಯವಸ್ಥಾಪಕ ಸುಧಾಕರ್ ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ತಂಬಾಕು ಮಾರುಕಟ್ಟೆ ವಹಿವಾಟು  ವಲಯದಾಧಿಕಾರಿ ವೇಣುಗೋಪಾಲ್ ಮತ್ತು ತಂಬಾಕು ಮಂಡಳಿ ಸದಸ್ಯ ಜಯರಾಂ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಇ-ಹರಾಜು ಬೇಕೇ ಬೇಡವೇ? ಎಂಬುದನ್ನು ಮಂಡಳಿ ನಿರ್ಧರಿಸಲಿದೆ ತಾಂತ್ರಿಕ ಸಮಸ್ಯೆ ಬಂದಾಗ ಬಗೆಹರಿಸಲು ಸಿಬ್ಬಂದಿಗಳಿದ್ದು, ಸಮಸ್ಯೆ ಪರಿಹರಿಸಲಿದ್ದೇವೆ ರೈತರು ಸಹಕರಿಸಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.