ADVERTISEMENT

ಉರಿದು ಹೋಗುತ್ತಿದೆ ಹಸಿರು ಅರಣ್ಯ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 10:00 IST
Last Updated 5 ಜೂನ್ 2012, 10:00 IST
ಉರಿದು ಹೋಗುತ್ತಿದೆ ಹಸಿರು ಅರಣ್ಯ!
ಉರಿದು ಹೋಗುತ್ತಿದೆ ಹಸಿರು ಅರಣ್ಯ!   

ಹುಣಸೂರು: ಜೂನ್ 5 ವಿಶ್ವ ಪರಿಸರ ಸಂರಕ್ಷಣಾ ದಿನ. ನೆಲ, ಜಲ, ವಾಯುವನ್ನು ರಕ್ಷಿಸಲು ಎಲ್ಲೆಡೆ ಕಾರ್ಯಕ್ರಮ, ಆಂದೋಲನ, ಭಾಷಣಗಳು ನಡೆಯುತ್ತವೆ. ಆದರೆ, ನಮ್ಮನ್ನು ರಕ್ಷಿಸುವ ಅರಣ್ಯ ನಾಶ ಮಾತ್ರ ನಿರಾತಂಕವಾಗಿ ಸಾಗಿದೆ. ಇದಕ್ಕೆ ಹುಣಸೂರು ತಾಲ್ಲೂಕು ಕೂಡ ಹೊರತಾಗಿಲ್ಲ.

ಅರೆ ಮಲೆನಾಡಿನ ದ್ವಾರದಲ್ಲಿರುವ ಹುಣಸೂರು ಕಾಡಿನಿಂದ ಆವರಿಸಿದೆ. 20 ವರ್ಷಗಳ ಹಿಂದೆ ಈ ಭಾಗದಲ್ಲಿ ಅಪರಿಮಿತ ಮಳೆ ಬೀಳುತ್ತಿತ್ತು. ಇದೀಗ ಮಳೆಯೇ ಅಪರೂಪ. 25 ವರ್ಷದ ಹಿಂದೆ ತಾಲ್ಲೂಕಿನಲ್ಲಿ ತಂಬಾಕು ಬೇಸಾಯ ಮಾಡುವವರ ಸಂಖ್ಯೆ ವಿರಳವಾಗಿತ್ತು. ಈಗ ಇವರ ಸಂಖ್ಯೆಗೆ ಕೊನೆಯೇ ಇಲ್ಲ.
 
ತಂಬಾಕು ಹದಗೊಳಿಸಲು ಅಪಾರ ಪ್ರಮಾಣದ ಉರುವಲು ಅಗತ್ಯ. ಈ ಉರುವಲಿಗಾಗಿ ದಟ್ಟ ಅರಣ್ಯವನ್ನೇ ಕಡಿದು ಸುಟ್ಟು ಬೂದಿ ಮಾಡಿದ್ದಾರೆ. ತಂಬಾಕು ಕೃಷಿಕರು. ಎರಡು ದಶಕಗಳ ಕಾಲ ಮನಸೋ ಇಚ್ಛೆ ಮರ ಕಡಿದಿದ್ದರಿಂದ ಇಂದು ಹನಿ ನೀರಿಗೂ ಪರದಾಡುವ ಸ್ಥಿತಿ ಹುಣಸೂರು ತಾಲ್ಲೂಕಿಗೆ ಬಂದಿದೆ.

ತಾಲ್ಲೂಕಿನಲ್ಲಿ ಈಗ ಎಷ್ಟು ಜನ ಅಧಿಕೃತ ತಂಬಾಕು ಬೆಳೆಗಾರರಿದ್ದಾರೊ ಅದರ ದುಪ್ಪಟ್ಟು ಜನ ಅನಧಿಕೃತವಾಗಿ ಬೆಳೆಗಾರರಿದ್ದಾರೆ. ತಾಲ್ಲೂಕಿನ ಶೇ 75 ರಷ್ಟು ಕೃಷಿ ಭೂಮಿಯಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಈ ತಂಬಾಕನ್ನು ಹದಗೊಳಿಸಲು ಪ್ರತಿ ವರ್ಷ 40 ಲಕ್ಷ ಟನ್ (ಸುಮಾರು 55 ಸಾವಿರ ಲಾರಿ) ಉರುವಲು ಸೌದೆ ಅವಶ್ಯ. ಇಷ್ಟು ದೊಡ್ಡ ಪ್ರಮಾಣದ ಸೌದೆಯನ್ನು ತಂಬಾಕು ಕೃಷಿಕರು ಬರೋಬ್ಬರಿ 20 ವರ್ಷಗಳಿಂದ ಸುಡುತ್ತಲೇ ಬಂದಿದ್ದಾರೆ!

`ಪ್ರತಿ ಕೆಜಿ ಹೊಗೆಸೊಪ್ಪು ಹದಗೊಳಿಸಲು 7 ಕೆ.ಜಿ. ಉರುವಲು ಬೇಕು. 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹೊಗೆಸೊಪ್ಪು ಹದಗೊಳಿಸಲು ಬೇಕಾದ ಸೌದೆ ಎಷ್ಟೆಂದು ಊಹಿಸಿಕೊಳ್ಳಲೂ ಭಯವಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ~ ಎನ್ನುತ್ತಾರೆ ಸೇವ್ ಅವರ್ ಅರ್ಥ್ ಕ್ಲಬ್‌ನ ಅಧ್ಯಕ್ಷ ಸಂಜಯ್.

ಪರ್ಯಾಯ ಮಾರ್ಗವೇನು?
`ದಕ್ಷಿಣ ಆಪ್ರಿಕಾದಲ್ಲಿ ಕಡಿಮೆ ಉರುವಲು ಬಳಸಿ ತಂಬಾಕು ಹದಗೊಳಿಸುವ ತಂತ್ರಜ್ಞಾನ ಬಳಕೆಯಲ್ಲಿದೆ. ಈ ತಂತ್ರಜ್ಞಾನದ ಸಲಕರಣೆಗಳನ್ನು ಹುಣಸೂರಿನ ಸೇವ್ ಅವರ್ ಅರ್ಥ್ ಕ್ಲಬ್ ತಂಬಾಕು ಮಂಡಳಿಗೆ ನೀಡಿದೆ. ಆದರೂ ಮಂಡಳಿ ಆಡಳಿತಾಧಿಕಾರಿಗಳ ಬೇಜವಾಬ್ದಾರಿಯಿಂದ  ತಂತ್ರಜ್ಞಾನ ಮೂಲೆ ಸೇರಿದೆ~ ಎಂದು ಕ್ಲಬ್ ಸದಸ್ಯ ಸೈಯದ್ ಮಹಮ್ಮದ್ ಷಾ ಬೇಸರ ವ್ಯಕ್ತಪಡಿಸುತ್ತಾರೆ.

ಈ ವಿಶೇಷ ತಂತ್ರಜ್ಞಾನದಿಂದ ದಕ್ಷಿಣ ಆಪ್ರಿಕಾ ದೇಶದಲ್ಲಿ ತಂಬಾಕಿಗೆ ಅಗತ್ಯವಿದ್ದ ಶೇ 70ರಷ್ಟು ಉರುವಲು ಕಡಿತಗೊಳಿಸಲಾಗಿದೆ. ರಾಜ್ಯದಲ್ಲಿಯೂ ಈ ತಂತ್ರಜ್ಞಾನ ಬಳಸಿ ಪರಿಸರ ರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಸ್ಪಂದಿಸಬೇಕಾಗಿದೆ. ಆದರೆ, ಅಧಿಕಾರಿ ವರ್ಗಕ್ಕಾಗಲಿ, ರೈತರಿಗಾಗಲಿ ಪರಿಸರದ ಬಗ್ಗೆ ಏಕೆ ಕರುಣೆ ಬರುತ್ತಿಲ್ಲ ಎಂಬುದೇ ತಿಳಿಯದು ಎನ್ನುತ್ತಾರೆ ಅವರು.

ಲಕ್ಷ್ಮಣತೀರ್ಥಕ್ಕೂ ಕುತ್ತು
ನಾಗರಹೊಳೆ ಅಭಯಾರಣ್ಯದಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿ ಹುಣಸೂರು ಪಟ್ಟಣ ಪ್ರವೇಶಿಸುತ್ತಿದ್ದಂತೆ ಮಾಲಿನಗೊಳ್ಳುತ್ತದೆ. ಪಟ್ಟಣದ ಕಲುಷಿತ ನೀರು ನಿರಂತರವಾಗಿ ನದಿ ಸೇರುತ್ತಿದೆ.

ಪರಿಸರವಾದಿಗಳು ಒಂದು ವರ್ಷದ ಹೋರಾಟ ಮಾಡಿದ ಫಲವಾಗಿ ನದಿ ಸ್ವಚ್ಛತಾ ಕಾರ್ಯ ಆರಂಭಗೊಂಡಿತ್ತು. ವಿಪರ್ಯಾಸವೆಂದರೆ ನದಿ ಸ್ವಚ್ಛತೆ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಧಿಕಾರಿಗಳು ಯೋಜನೆಗೆ ಎಳ್ಳು-ನೀರು ಬಿಟ್ಟಿರುವ ಬಗ್ಗೆ ರಾಜ್ಯ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಕಾರ್ಯಪಡೆಗೆ ಸೇವ್ ಅವರ್ ಅರ್ಥ್ ಕ್ಲಬ್‌ನ ಸದಸ್ಯರು ಮಾಹಿತಿ ನೀಡಿದ್ದಾರೆ. ಇದಕ್ಕೆ ಮತ್ತೆಷ್ಟು ದಿನ ಹೋರಾಟ ಮಾಡಬೇಕೋ?

ವಿಶ್ವ ಪರಿಸರ ರಕ್ಷಣೆಯ ದಿನ ಲಕ್ಷ್ಮಣತೀರ್ಥ ನದಿಯ ರಕ್ಷಣೆಯ ಬಗ್ಗೆ ತಾಲ್ಲೂಕಿನಾದ್ಯಂತ ಮಾತುಗಳು ಕೇಳಿಸುತ್ತವೆ. ಮಾರನೇ ದಿನದಿಂದ ನದಿಯ ನೋವು ಯಾರಿಗೂ ಕೇಳಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.