ADVERTISEMENT

ಉರ್ದು ಶಾಲೆಯಲ್ಲೂ ಕನ್ನಡ ಆರಂಭಿಸಿ: ಶಾಸಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:05 IST
Last Updated 2 ಜನವರಿ 2012, 10:05 IST

ಮೈಸೂರು: `ಉರ್ದು ಶಾಲೆಗಳಲ್ಲೂ ನಾಲ್ಕನೇ ತರಗತಿಯಿಂದ ಕನ್ನಡವನ್ನು ಭಾಷೆಯಾಗಿ ಕಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ಆದರೆ, ಇದುವರೆಗೂ ಸರ್ಕಾರ ಈ ಬಗ್ಗೆ ಕಾಳಜಿ ವಹಿಸಿಲ್ಲ~ ಎಂದು ಶಾಸಕ ತನ್ವೀರ್ ಸೇಟ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಚಳವಳಿ ಕೇಂದ್ರ ಸಮಿತಿ ಜಂಟಿಯಾಗಿ ನಗರದ ನೆಹರು ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಕನ್ನಡ ಪತ್ರಿಕೆ ಕೊಂಡು ಓದಿ~ ಅಭಿಯಾನದಲ್ಲಿ ಮಾತನಾಡಿದರು.

`ರಾಜ್ಯದಲ್ಲಿ 5,900 ಉರ್ದು ಶಾಲೆಗಳಿವೆ. ಈ ಶಾಲೆಗಳಲ್ಲಿ 4ನೇ ತರಗತಿಯಿಂದ ಕನ್ನಡ ಭಾಷೆಯನ್ನು ಕಲಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಶಿಕ್ಷಕರ ನೇಮಕಾತಿ ಮಾಡಿ ಕನ್ನಡ ಕಲಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿಲ್ಲ. ಆದರೆ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಶಿಕ್ಷಣ ನೀಡಲು ಮುಂದಾಗಿದೆ~ ಎಂದು ಕಿಡಿ ಕಾರಿದರು.

`ಕನ್ನಡ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಗಡಿ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಬೇಕು. ಕನ್ನಡ ಚಿತ್ರಗಳಿಗೆ ವಿನಾಯಿತಿ ನೀಡಿದಂತೆ ಕನ್ನಡ ಪತ್ರಿಕೆಗಳಿಗೂ ವಿನಾಯಿತಿ ನೀಡಬೇಕು. ಜಾಹೀರಾತು ನೀಡುವಲ್ಲಿ ಸ್ಥಳೀಯ ಪತ್ರಿಕೆಗಳನ್ನು ಕಡೆಗಣಿಸಬಾರದು. ಶಾಲಾ-ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳು ಕನ್ನಡ ಪತ್ರಿಕೆ ಓದುವ ವಾತಾವರಣ ಕಲ್ಪಿಸಬೇಕು. ವಿವಿಧ ಬಡಾವಣೆಗಳಲ್ಲಿ ಪಾಲಿಕೆ ವತಿಯಿಂದ ಹಿರಿಯ ನಾಗರಿಕೆ ಉಚಿತವಾಗಿ ಪತ್ರಿಕೆ ಓದಲು ಅವಕಾಶ ಮಾಡಿಕೊಡಬೇಕು~ ಎಂದು ಆಗ್ರಹಿಸಿದರು.

ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, `ಪತ್ರಿಕೆ ಓದುವುದರಿಂದ ಮಾಹಿತಿ ಮಾತ್ರವಲ್ಲ, ಹೊರ ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದು. ಪತ್ರಿಕೆ ಎಂದರೆ ಬದುಕಿನ ಅವಿಭಾಜ್ಯ ಅಂಗ, ನಮ್ಮ ಸುಖ ದುಃಖಗಳಿಗೆ ವೇದಿಕೆ. ಆದ್ದರಿಂದ ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು. ಆ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಬೆಳೆಸಬೇಕು~ ಎಂದು ಹೇಳಿದರು.

ಶಾಸಕ ತೋಂಟದಾರ್ಯ, ಪಾಲಿಕೆ ಸದಸ್ಯೆ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಜನತಾ ಬಜಾರ್ ಅಧ್ಯಕ್ಷ ಎಸ್.ಚಂದ್ರಶೇಖರ್, ಲಷ್ಕರ್‌ಠಾಣೆ ಪಿಎಸ್‌ಐ ಪ್ರಭಾಕರರಾವ್ ಶಿಂಧೆ, ಸಾಗರ್ ರೆಸಿಡೆನ್ಸಿ ಮಾಲೀಕ ಸಾಗರ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ್, ವಿದ್ಯಾಸಾಗರ ಕದಂಬ, ರಂಗಕರ್ಮಿ ರಾಜಶೇಖರ್ ಕದಂಬ, ಕನ್ನಡ ಚಳವಳಿ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.