ADVERTISEMENT

ಒಂದು ವಾರದೊಳಗೆ ಪರಿಹಾರ: ಭರವಸೆ

ನಾಗಾಪುರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌

​ಪ್ರಜಾವಾಣಿ ವಾರ್ತೆ
Published 19 ಮೇ 2018, 6:52 IST
Last Updated 19 ಮೇ 2018, 6:52 IST

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದ ಗಿರಿಜನರ ಪುನರ್ವಸತಿ ಕೇಂದ್ರಗಳಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಶುಕ್ರವಾರ ಭೇಟಿ ನೀಡಿ ಅಲ್ಲಿನ ವಾಸಿಗಳ ಸಮಸ್ಯೆ ಆಲಿಸಿದರು.

ಸ್ಥಳೀಯರ ಸಮಸ್ಯೆ ಕುರಿತು ಸಮಗ್ರ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ಸರ್ಕಾರ ಫಲಾನುಭವಿಗಳಿಗೆ ನೀಡಿರುವ ಕೃಷಿ ಭೂಮಿ ಸರ್ವೆ ಕಾರ್ಯ ಮುಗಿಸಿ, ನಿಗದಿಯಂತೆ ಭೂಮಿ ನೀಡಲು ಬದ್ಧವಿದ್ದು, ಸರ್ವೆ ಕಾರ್ಯಕ್ಕೆ ಗಿರಿಜನರು ಸಹಕರಿಸಬೇಕು ಎಂದು ತಿಳಿಸಿದರು.

ನಾಗಾಪುರ ಪುನರ್ವಸತಿ ಕೇಂದ್ರದ 6 ಬ್ಲಾಕ್‌ಗಳಲ್ಲಿ ಈಗಾಗಲೇ 4 ಬ್ಲಾಕ್‌ಗಳಲ್ಲಿ ಸರ್ವೆ ಕಾರ್ಯ ಮುಗಿಸಿ ಗಡಿ ಗುರುತಿಸಲಾಗಿದ್ದು, 731 ಕುಟುಂಬಗಳಿಗೂ ಕೃಷಿ ಭೂಮಿ ನೀಡಲು ಮುಂದಾಗಿದ್ದೇವೆ. ಆದರೆ, ಸರ್ವೆ ಇಲಾಖೆ ಗಡಿ ಗುರುತಿಸಿ ನೆಟ್ಟಿರುವ ಕಲ್ಲನ್ನು ಗಿರಿಜನರು ಕಿತ್ತು ಹಾಕುತ್ತಿರುವ ಬಗ್ಗೆ ದೂರುಗಳು ಬಂದಿದೆ. ಹೀಗೆ ಮಾಡುವುದರಿಂದ ನಿಗದಿತ ಭೂಮಿ ಗುರುತಿಸಲು ಕಷ್ಟವಾಗುತ್ತಿದೆ. ಅಲ್ಲದೇ, ಸರ್ವೆಯಲ್ಲಿ ಕೆಲವೊಂದು ಲೋಪಗಳು ಎದುರಾಗಿದ್ದು, ಅದನ್ನೂ ಸರಿಪಡಿಸಿದ ಬಳಿಕ ಪ್ರತಿ ಫಲಾನುಭವಿಗೂ ಪಹಣಿಯ ಅನುಸಾರ ಭೂಮಿ ನೀಡಲಿದ್ದೇವೆ ಎಂದರು.

ADVERTISEMENT

‘ನಾಗಾಪುರ ಪುನರ್ವಸತಿ ಕೇಂದ್ರ ದಲ್ಲಿ ಸರ್ಕಾರಿ ಪ್ಯಾಕೇಜ್‌ನಲ್ಲಿ ಗಿರಿಜನರಿಗೆ ನೀಡಿರುವ ಭೂಮಿಯನ್ನು ಅನ್ಯರು ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, 3 ಜನರ ಸಮಿತಿ ರಚಿಸಿ ಭೂಮಿ ದಾಖಲೆ ಪರಿಶೀಲಿಸಿ ಮಾಲೀಕರನ್ನು ಗುರುತಿಸಿ ಅದನ್ನು 1993ರಲ್ಲಿ ಅರಣ್ಯದಿಂದ ಹೊರ ಬಂದ ಕುಟುಂಬದವರಿಗೆ ಭೂಮಿಯ ದಾಖಲೆ ನೀಡಲಿದ್ದೇವೆ’ ಎಂದು ಕೆ.ನಿತೀಶ್‌ ಭರವಸೆ ನೀಡಿದರು.

ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಮೂಲಸವಲತ್ತು ಕೊರತೆ ಕುರಿತು ಗಮನಕ್ಕೆ ಬಂದಿದ್ದು, ಕುಡಿಯುವ ನೀರು, ವಸತಿ ಸೇರಿದಂತೆ ಎಲ್ಲವನ್ನು ಹಂತ ಹಂತವಾಗಿ ಸರಿಪಡಿಸುತ್ತೇನೆ ಎಂದರು.

ನಾಗಾಪುರ ಪುನರ್ವಸತಿ ಕೇಂದ್ರದ ವ್ಯವಸಾಯ ಆಂದೋಲನ ಸಮಿತಿ ಸಂಚಾಲಕ ಎಂ.ಬಿ.ಪ್ರಭು ಮಾತನಾಡಿ, ಪುನರ್ವಸತಿಗೊಂಡ ಗಿರಿಜನರಿಗೆ ಸುಸ್ಥಿರ ಜೀವನ ನಡೆಸಲು ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ರೀತಿ ಸೌಲಭ್ಯಗಳನ್ನು ವಿವಿಧ ಇಲಾಖೆಗಳಿಂದ ನೀಡಬೇಕು. ಕೃಷಿ ಮಾಡಲು ಇಲಾಖೆಯಿಂದ ಗಿರಿಜನರಿಗೆ ಬಿತ್ತನೆ ಬೀಜದಿಂದ ಉಳುಮೆಗೆ ಎತ್ತುಗಳನ್ನು ನೀಡಬೇಕು ಎಂದರು.

ತೆರೆಯಲು ಸರ್ಕಾರ 6 ವರ್ಷಗಳ ಹಿಂದೆ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಸಿಬ್ಬಂದಿ ನೇಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿ ಗಮನಹರಿಸಿಲ್ಲ ಎಂದು ಆರೋಪಿಸಿದರು. ಕುಡಿಯುವ ನೀರಿನ ಸಮಸ್ಯೆ ಬ್ಲಾಕ್‌ 2, 3, 4 ರಲ್ಲಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ಹುಲಿ ಯೋಜನಾ ನಿರ್ದೇಶಕ ರವಿಶಂಕರ್‌, ಎಸಿಎಫ್‌ ಪ್ರಸನ್ನಕುಮಾರ್‌, ಪುನರ್ವಸತಿ ಕೇಂದ್ರದ ವಾಸಿಗಳಾದ ಸೋಮ, ಹರೀಶ್‌, ಸಣ್ಣಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.