ADVERTISEMENT

ಒಣಗಿದ ಮರಗಳಿಗೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 25 ಮೇ 2018, 3:49 IST
Last Updated 25 ಮೇ 2018, 3:49 IST
ನೀಲಗಿರಿ ರಸ್ತೆಯಲ್ಲಿದ್ದ ಒಣಗಿದ ಮರವನ್ನು ಪಾಲಿಕೆ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು
ನೀಲಗಿರಿ ರಸ್ತೆಯಲ್ಲಿದ್ದ ಒಣಗಿದ ಮರವನ್ನು ಪಾಲಿಕೆ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು   

ಮೈಸೂರು: ಗಾಳಿ ಮಳೆಗೆ ಮರಗಳು ಬಿದ್ದು ನಗರದಲ್ಲಿ ಉಂಟಾಗಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡಿರುವ ಪಾಲಿಕೆಯು ಒಣಗಿದ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದೆ.

ಅರಮನೆ ಮತ್ತು ದಸರಾ ವಸ್ತುಪ್ರದರ್ಶನ ಮೈದಾನದ ನಡುವೆ ನೀಲಗಿರಿ ರಸ್ತೆ ಬದಿಯಲ್ಲಿದ್ದ ಬೃಹತ್‌ ಗಾತ್ರದ ಮರವನ್ನು ಗುರುವಾರ ಉರುಳಿಸಲಾಯಿತು. ಈ ಮರದ ಕಾಂಡ ಒಣಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು.

ಮರ ತೆರವು ಕಾರ್ಯಾಚರಣೆ ವೇಳೆ ಹಾರ್ಡಿಂಜ್‌ ವೃತ್ತ ಮತ್ತು ಬಸವೇಶ್ವರ ವೃತ್ತದ ನಡುವೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಮಾರು ಒಂದೂವರೆ ಗಂಟೆ ಸಂಚಾರ ದಟ್ಟಣೆ ಉಂಟಾಯಿತು.

ADVERTISEMENT

ಕೆಲ ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಮಳೆಗೆ ನಗರದಲ್ಲಿ ಈಗಾಗಲೇ ಹಲವು ಅನಾಹುತ ಸಂಭವಿಸಿದೆ. ಕೆಆರ್‌ಎಸ್‌ ರಸ್ತೆಯ ಇಎಸ್‌ಐ ಆಸ್ಪತ್ರೆ ಮುಂಭಾಗ ಸೋಮವಾರ ರಾತ್ರಿ ಮರವೊಂದು ಆಟೊ ಮೇಲೆ ಉರುಳಿ ಯುವತಿ ಬಲಿಯಾಗಿದ್ದಳು.

ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣ ಭವನದ ಮುಂಭಾಗದಲ್ಲಿ ಮರ ಬಿದ್ದು, ಎರಡು ಬೈಕ್‌ಗಳು ಜಖಂ ಆಗಿದ್ದವು. ಸರಸ್ವತಿಪುರಂ 13ನೇ ಮುಖ್ಯ ರಸ್ತೆ, ಹೆಬ್ಬಾಳಿನ ಸೂರ್ಯ ಬೇಕರಿ, ಶ್ರೀರಾಂಪುರದ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.