ADVERTISEMENT

ಕನ್ನಡ ಕೃತಿಗಳು ಪರಭಾಷೆಗೆ ಅನುವಾದವಾಗಲಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:35 IST
Last Updated 12 ಸೆಪ್ಟೆಂಬರ್ 2011, 9:35 IST

ಮೈಸೂರು: ರಾಜ್ಯದಲ್ಲಿರುವ ಅನುವಾದ ಅಕಾಡೆಮಿಯು ಕನ್ನಡದ ಮಹಾನ್ ಲೇಖಕರ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸಿ ಹೊರ ರಾಜ್ಯಗಳಲ್ಲಿಯೂ ಪ್ರಚುರಪಡಿಸಬೇಕು ಎಂದು ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸಂಚಾಲಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ಆಶ್ರಯದಲ್ಲಿ ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಲಾಗಿದ್ದ, ಮಹಾಕವಯತ್ರಿ ಡಾ. ಲತಾ ರಾಜಶೇಖರ ಅವರ ಮಹಾಕಾವ್ಯ ದರ್ಶನ- ಒಂದು ಅವಲೋಕನ (ವಿಚಾರಸಂಕಿರಣ-2) ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.

`ಉತ್ತರ ಭಾರತದಲ್ಲಿ ಕನ್ನಡದ ಕುವೆಂಪು, ಬೇಂದ್ರೆಯವರಂತಹ ಸಾಹಿತಿಗಳ ಬಗ್ಗೆ ಕೇಳಿದವರೇ ವಿರಳ. ಏಕೆಂದರೆ ಅವರ ಭಾಷೆಯಲ್ಲಿ ನಮ್ಮ ಶ್ರೀಮಂತ ಸಾಹಿತ್ಯ ಲಭ್ಯವಿಲ್ಲ. ಆದ್ದರಿಂದ ವಿಶೇಷವಾಗಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಾದರೂ ನಮ್ಮ ಲೇಖಕರ ಮಹತ್ವದ ಕೃತಿಗಳು ಅನುವಾದಗೊಳ್ಳಬೇಕು~ ಎಂದರು.

`ನಮ್ಮಲ್ಲಿ ಎಷ್ಟೋ ಅಮೂಲ್ಯವಾದ ಪುಸ್ತಕಗಳಿವೆ. ಆದರೆ, ಅವುಗಳಿಗೆ ಸರಿಯಾದ ಪ್ರಚಾರ ಮತ್ತು ಉತ್ತರ ಭಾರತಿಯರನ್ನು ತಲುಪುವ ಅವಕಾಶ ಸಿಗದೇ ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭ್ಯವಾಗಿಲ್ಲ. ಇದು ಕನ್ನಡ ಭಾಷೆಗೆ ಬಹುದೊಡ್ಡ ನಷ್ಟ. ನಾವು ರಚಿಸುವ ಕೃತಿಗಳು ನಮ್ಮ ಮಕ್ಕಳಿದ್ದಂತೆ. ಅವುಗಳನ್ನು ಇನ್ನೊಬ್ಬರಿಗೆ ತಿಳಿಸುವ ಕೆಲಸ ಮಾಡಬೇಕು. ಮುಜುಗರವಾದರೆ, ಲೇಖಕನ ಸುತ್ತಲಿರುವ ಸ್ನೇಹಿತರ ಬಳಗ, ಸಂಘ ಸಂಸ್ಥೆಗಳು ಆ ಕೆಲಸ ಮಾಡಬೇಕು~ ಎಂದು ಸಲಹೆ ನೀಡಿದರು.

`ಯಾವುದೇ ಲೇಖಕನ ವೈಯಕ್ತಿಕ ನಡವಳಿಕೆ ಏನೇ ಇರಲಿ. ಆತ ಬರೆಯಲು ಕುಳಿತಾಗ ಋಷಿತ್ವ ಇರಬೇಕು. ಆಗಲೇ ಅವನ ಬರವಣಿಗೆಗೆ ಗಟ್ಟಿತನ ಬರುತ್ತದೆ. ಋಷಿಗಳಿಗೆ ತಪಸ್ಸಿನಲ್ಲಿ ಇರುವಷ್ಟೇ ತಲ್ಲೆನತೆ ಇರಬೇಕು. ದ.ರಾ. ಬೇಂದ್ರೆಯವರ ಕವಿತೆಗಳು ಇದಕ್ಕೆ ಉತ್ತಮ ನಿದರ್ಶನಗಳು~ ಎಂದು ಅಭಿಪ್ರಾಪಟ್ಟರು.

`ದೃಶ್ಯ ಮಾಧ್ಯಮದ ಹಾವಳಿಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಯುವ ಲೇಖಕರಲ್ಲಿ ಓದು ಹವ್ಯಾಸ  ಕುಂಠಿತವಾಗಿದೆ. ನಮ್ಮ ನೆಚ್ಚಿನ ಕವಿಗಳು, ಸಾಹಿತಿಗಳ ಪ್ರಭಾವವನ್ನು ನಮ್ಮ ಛಾಪಿನಲ್ಲಿ ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಇದರಿಂದ ಕೃತಿಯ ಶ್ರೀಮಂತಿಕೆ ಮತ್ತು ಗುಣಮಟ್ಟ ಹೆಚ್ಚುತ್ತದೆ~ ಎಂದರು.

`ಲತಾ ರಾಜಶೇಖರ್ ಅವರು ಬಸವ ಮಹಾದರ್ಶನ, ಏಸು ಮಹಾದರ್ಶನ ಮತ್ತು ಬುದ್ಧ ಮಹಾದರ್ಶನಗಳನ್ನು ರಚಿಸಿರುವುದು ಸಣ್ಣ ಕೆಲಸವಲ್ಲ. ಆದರೆ ಒಬ್ಬ ಮಹಿಳೆ ಇದನ್ನು ಮಾಡಿದ್ದಾಳೆ ಎಂದು ಅನುಕಂಪವಾಗಲೀ, ಕರುಣೆ ಯನ್ನಾಗಲೀ ತೋರಿಸುವ ಅಗತ್ಯವೂ ಇಲ್ಲ. ಅವರು ನಾವ್ಯಾರೂ ಮಾಡದ್ದನ್ನು ಮಾಡಿ ತೋರಿಸಿದ್ದಾರೆ. ಅತ್ಯಂತ ಕಠಿಣ ಹಾದಿಯಲ್ಲಿ ಅವರು ಈ ಮೂವರು ಮಹಾದಾರ್ಶನಿಕರನ್ನು ಬಹಳ ಗಂಭೀರವಾಗಿ, ಉತ್ತಮವಾಗಿ ನಿರೂಪಿಸಿದ್ದಾರೆ~ ಎಂದರು.

ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ. ಎಂ. ಅಕಬರ ಅಲಿ ವಹಿಸಿದ್ದರು. ಬಸವ ಮಹಾದರ್ಶನದ ಬಗ್ಗೆ ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ನೀಲಗಿರಿ ತಳವಾರ್, ಏಸು ಮಹಾದರ್ಶನ ಕುರಿತು ಹಿರಿಯ ವಿಮರ್ಶಕ ಪ್ರೊ. ಎ.ಎಸ್. ಜಯರಾಂ, ಬುದ್ಧ ಮಹಾದರ್ಶನ ಕುರಿತು ವಿಮರ್ಶಕ ಡಾ. ಮ. ರಾಮಕೃಷ್ಣ ಅವಲೋಕನ ಮಾಡಿದರು. ಹಿರಿಯ ಸುಗಮ ಸಂಗೀತ ಗಾಯಕಿ ಶಾಂತಾ ಜಗದೀಶ ಮಹಾಕಾವ್ಯ ಗಾಯನ ಮಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಎಂ.ಚಂದ್ರಶೇಖರ್, ಬಿ.ವಿದ್ಯಾಸಾಗರ ಕದಂಬ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.