ADVERTISEMENT

ಕಲೆ ಬದುಕು ಕಲಿಸುತ್ತದೆ: ಮಠಪತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 8:15 IST
Last Updated 17 ಫೆಬ್ರುವರಿ 2012, 8:15 IST

ಮೈಸೂರು:ನೃತ್ಯ, ಸಾಹಿತ್ಯ, ನಾಟಕ, ಸಂಗೀತದಂತಹ ಕಲೆಗಳು ನಿರುಪಯೋಗಿ ಅಲ್ಲ; ಅವು ಬದುಕು ಕಲಿಸುತ್ತವೆ ಎಂದು ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಅಭಿಪ್ರಾಯಪಟ್ಟರು.

ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರವು ನಗರದ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ `ನೃತ್ಯ ಸಪ್ತಾಹ~ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲೆಯು ಪ್ರೀತಿ, ವಿಶ್ವಾಸ, ನೈತಿಕತೆ, ಸಹಬಾಳ್ವೆಯನ್ನು ಕಲಿಸುತ್ತದೆ. ಕಲಾವಿದರಲ್ಲಿ ಬೆಳೆದ ಈ ಗುಣಗಳನ್ನು ಪ್ರೇಕ್ಷಕರೂ ಅಳವಡಿಸಿಕೊಂಡರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಬೇಂದ್ರೆ ಅವರು ಹೇಳಿದಂತೆ `ನಾಟಕ ಜೀವನವಾಗಬೇಕು; ಜೀವನ ನಾಟಕವಾಗಬೇಕು~ ಎಂಬ ಆಶಯ ವ್ಯಕ್ತಪಡಿಸಿದರು.

 ಕಲೆ ನಿರುಪಯೋಗಿ ಎಂಬ ಭಾವನೆ ಅನೇಕರಲ್ಲಿ ದೃಢವಾಗಿದೆ. ಹೀಗಾಗಿ ತಮ್ಮ ಮಕ್ಕಳು ಹೆಚ್ಚು ಅಂಕ ಪಡೆಯಬೇಕು ಎಂದು ಬಹುಪಾಲು ಪೋಷಕರು ಬಯಸುತ್ತಾರೆ. ನಗರೀಕರಣದ ಪ್ರಭಾವದಿಂದಾಗಿ ಪ್ರೀತಿ, ವಿಶ್ವಾಸ ಮಾಯವಾಗುತ್ತಿದೆ. ನಿರ್ಜೀವ ವಸ್ತುಗಳೊಂದಿಗೆ ಜೀವಿಸುವುದನ್ನು ಬಿಟ್ಟು ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಬೇಕು ಎಂದರು.

ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಐಇ ಕೋಶಾಧ್ಯಕ್ಷ ಎಸ್.ವಿ.ಲಕ್ಷ್ಮೀನಾರಾಯಣ, ವಿದುಷಿ ಕೃಪಾ ಫಡಕೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.